ಮೈಸೂರು: ಕೋಣನೂರು ಮತ್ತು ಚುಂಚನಹಳ್ಳಿ ಗ್ರಾಮದಲ್ಲಿನ ಕಿರು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಕುರುಚಲು ಅರಣ್ಯ ಪ್ರದೇಶದ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಮಧ್ಯಾಹ್ನ ಕೃಷ್ಣರಾಜಪುರ ಗ್ರಾಮದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಬೆಟ್ಟದಲ್ಲಿದ್ದ ಮರ, ಗಿಡಗಳು ಭಸ್ಮವಾಗಿದೆ. ಅಲ್ಲದೆ ಬೆಟ್ಟದ ಸುತ್ತಮುತ್ತ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯಿಂದ ನಾಶವಾಗಿದೆ.
ಬೆಂಕಿ ಸಂಭವಿಸಿದ್ದರಿಂದ ಅರಣ್ಯದಲ್ಲಿದ್ದ ಪ್ರಾಣಿ ಪಕ್ಷಿಗಳು ದಿಕ್ಕಾ ಪಾಲಾಗಿ ಓಡಿಹೋಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸವನ್ನೇ ಪಡಬೇಕಾಗಿತ್ತು. ಬೇಸಿಗೆ ಕಾಲ ಬರುವ ಮುನ್ನವೇ ಅರಣ್ಯ ಭಸ್ಮವಾಗಿರುವುದು ಬೇಸರದ ಸಂಗತಿಯಾಗಿದೆ.
ಅಲ್ಲದೆ ಈ ಅರಣ್ಯ ಪ್ರದೇಶದಲ್ಲಿ ಜಿಂಕೆ, ನವಿಲು, ಚಿರತೆ, ಮೊಲ, ಕಾಡು ಹಂದಿ, ಕಿರುಬ ಸೇರಿ ಹಲವು ಪ್ರಾಣಿ ಪಕ್ಷಿಗಳು ವಾಸಿಸುತ್ತಿದ್ದವು.