ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಸಾರಿಗೆ ನೌಕರರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಹೀಗಾಗಿ ಎಐಟಿಯುಸಿನ ಅನಂತಸುಬ್ಬಾರಾವ್ ಅವರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಡಿಹಳ್ಳಿ ಮುಖ ಯಾರು ನೋಡಿದ್ರು. ಈಗ ಅವರನ್ನು ಯುವಕರು ನಾಯಕರು ಮಾಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಸಿಎಂ, ಸವದಿ ಸಭೆ ಕರೆದಿದ್ದಾರೆ. ಕೋಡಿಹಳ್ಳಿ ಕರೆಯಿರಿ ಅಂತ ಹೇಳಿದೆ. ಆದರೆ ಸಿಎಂ, ಸವದಿ ಹಾಗೂ ಅಧಿಕಾರಿಗಳಿಗೆ ಕೋಡಿಹಳ್ಳಿ ಬಳಿ ಮಾತನಾಡಲು ಇಷ್ಟ ಇಲ್ಲ ಎಂದು ಗುಡುಗಿದರು.
ಇಂದು ಸರ್ಕಾರ ಸ್ಪಂದಿಸಿದ್ರೆ ಬಸ್ ಓಡಿಸಲು ನಾನು ಕರೆ ನೀಡುವೆ. ಕೋಡಿಹಳ್ಳಿ ಯೂನಿಯನ್ ನಲ್ಲಿ ಮಾತ್ರ ಸದಸ್ಯರಿಲ್ಲ. ನಮ್ಮಲ್ಲೂ ಸದಸ್ಯರಿದ್ದಾರೆ. ನಮಗೂ ಜನರು, ನೌಕರರ ಪರ ಕಾಳಜಿ ಇದೆ. ಸರ್ಕಾರಿ ನೌಕರರಾದ್ರೆ ಏನ್ ಪ್ರಯೋಜನ ಹೇಳಿ ಎಂದು ಪ್ರಶ್ನಿಸಿದರು.
ಹೈದರಾಬಾದ್‍ನಲ್ಲಿ ಸರ್ಕಾರಿ ಸಾರಿಗೆ ನೌಕರರಾಗಿದ್ದಾರೆ. ಏನ್ ಪ್ರಯೋಜನ..? ಒಂದ್ ಕಮಿಟಿ ಸಭೆ ಆಗಲಿ. ಹೀಗೆ ದಿನಗಟ್ಟಲೆ ಸ್ಟ್ರೈಕ್ ಮಾಡಿದರೆ ಪ್ರಯಾಣಿಕರಿಗೆ ತೊಂದರೆ ಆಗಲಿದೆ ಎಂದು ವಾಗ್ದಾಳಿ ನಡೆಸಿದರು. ಅಲ್ಲದೆ ನಾನು ಈಗ ಕಾಸ್ಟ್ಲಿ ಮನುಷ್ಯ ಆದೆ. ಕಾರಣ ಚಪ್ಪಲಿ ಹಾರ ಹಾಕಿದ್ದಾರೆ. ಉಪೇಂದ್ರ ಜಾಹೀರಾತು ನೀಡುವ ಚಪ್ಪಲಿ ಹಾರ ಹಾಕಿ. ಹೂವಿನ ಹಾರ 200 ರೂ, ಅದೇ ಚಪ್ಪಲಿ ಹಾರ 20 ಸಾವಿರ ಹಾಕಿ ಎಂದು ಗರಂ ಆದರು.