ಚಿತ್ರದುರ್ಗ: ಎಲ್ಲೆಡೆ ಕೊರೊರಾ ಎರಡನೇ ಅಲೆಯಿಂದಾಗಿ ಸರ್ಕಾರ ರಾಜ್ಯಾದ್ಯಂತ ಸೆಮಿ ಲಾಕ್ ಡೌನ್ ಘೋಷಿಸಿರುವ ಪರಿಣಾಮ ಕೋಟೆನಾಡಿನ ಅನ್ನದಾತರ ಮೇಲೆ ಪ್ರಭಾವ ಬೀರಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕರಿ ಓಬೇನಹಳ್ಳಿ ಗ್ರಾಮದ ಹಲವು ಜನ ರೈತರು ಹತ್ತಾರು ಎಕರೆಯಲ್ಲಿ ಲಕ್ಷ ಲಕ್ಷ ಹಣ ಖರ್ಚು ಮಾಡಿ, ಗುಲಾಬಿ ಹೂವು, ಬದನೆ ಕಾಯಿ ಹಾಗೂ ಬೂದು ಕುಂಬಳಕಾಯಿ ಬೆಳೆದಿದ್ದಾರೆ. ಆದರೆ ಲಾಕ್ ಡೌನ್‍ನಿಂದಾಗಿ ದಿಢೀರ್ ಅಂತ ಹೂವು, ಹಣ್ಣು ಹಾಗೂ ತರಕಾರಿ ಬೆಲೆ ಕುಸಿತವಾಗಿದೆ. ಹೀಗಾಗಿ ಖರೀದಿಸಲು ಯಾರು ಸಹ ಮುಂದೆ ಬರುತ್ತಿಲ್ಲ. ಅಲ್ಲದೇ ಅವುಗಳನ್ನು ಕಷ್ಟಪಟ್ಟು ಮಾರುಕಟ್ಟೆಗೆ ಸಾಗಿಸಿದರೆ, ಸಾಗಣೆಯ ವೆಚ್ಚ ಸಹ ಅನ್ನದಾತನಿಗೆ ಸಿಗಲಾರದೆಂಬ ಆತಂಕದಲ್ಲಿ ಅನ್ನದಾತರಿದ್ದಾರೆ.
ಬೆಲೆ ಕುಸಿತ ಹಾಗೂ ಖರೀದಿಸುವವರಿಲ್ಲದೇ ಸೊಂಪಾಗಿ ಬೆಳೆದ ಬೆಳೆಗಳು ಹೊಲದಲ್ಲೇ ಕೊಳೆತು ಹೋಗುತ್ತಿವೆ. ಹೀಗಾಗಿ ಸಾಲ ಸೂಲ ಮಾಡಿ ಬೆಳೆಯನ್ನು ಮಾರಾಟ ಮಾಡಿ ಸಾಲ ಮುಕ್ತರಾಗಬೇಕೆಂಬ ಕನಸು ಕಂಡಿದ್ದ ಕರಿ ಓಬೇನಹಳ್ಳಿ ಗ್ರಾಮದ ರೈತರಾದ ಯಶೋದಮ್ಮ, ಚಿಕ್ಕಣ್ಣ, ಪೂಜಾರಿ ಚಿಕ್ಕಣ್ಣ ಸೇರಿದಂತೆ ಹಲವರು ದಾರಿಕಾಣದೇ ಕಂಗಾಲಾಗಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು, ನಷ್ಟಕ್ಕೆ ತಕ್ಕ ಪರಿಹಾರ ಒದಗಿಸಬೇಕೆಂದು ಅನ್ನದಾತರು ಮನವಿ ಮಾಡಿದ್ದಾರೆ.