ನವದೆಹಲಿ: ಕೊವಿಶೀಲ್ಡ್ ಬೆನ್ನಲ್ಲೇ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆ ವಿತರಣೆ ಪ್ರಾರಂಭಗೊಂಡಿದೆ.
ಇನ್ನೂ ಮೂರನೇ ಹಂತದ ಪ್ರಯೋಗದಲ್ಲಿರುವ ಕೋವಾಕ್ಸಿನ್ ಬಗ್ಗೆ ಸಾಕಷ್ಟು ಸಂದೇಹಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಬಯೋಟೆಕ್ ಸಂಸ್ಥೆ ಮಹತ್ವದ ಹೇಳಿಕೆ ನೀಡಿದೆ. ತಮ್ಮ ಸಂಸ್ಥೆಯ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮ ಉಂಟಾಗಿದೆ ಎಂದು ಸಾಬೀತುಪಡಿಸಿದ್ರೆ ನಷ್ಟ ಪರಿಹಾರ ಕಲ್ಪಿಸುತ್ತೇವೆ ಎಂದು ಪ್ರಕಟಣೆ ಹೊರಡಿಸಿದೆ.
ಕೋವಾಕ್ಸಿನ್ 3ನೇ ಹಂತದ ಪ್ರಯೋಗದಲ್ಲಿರುವುದರಿಂದ ಈ ಲಸಿಕೆ ಪಡೆದುಕೊಳ್ಳುವವರಿಂದ ಭಾರತ ಬಯೋಟೆಕ್ ಸಂಸ್ಥೆ ಸಮ್ಮತಿ ಪತ್ರಕ್ಕೆ ಸಹಿಪಡೆದುಕೊಳ್ಳುತ್ತಿದೆ. ಈ ಪತ್ರದಲ್ಲಿ ಸಂಸ್ಥೆ ಹಲವು ಪ್ರಮುಖ ಅಂಶಗಳನ್ನು ವಿವರಿಸಿದೆ. ಕೋವಾಕ್ಸಿನ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ. ಕೋವಿಡ್ ವಿರುದ್ಧ ಹೋರಾಡಲು ಈ ಲಸಿಕೆ ವ್ಯಕ್ತಿಗಳ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂಬುದನ್ನು ಮೊದಲ 2 ಪ್ರಯೋಗಗಳಲ್ಲಿ ಸಾಬೀತಾಗಿದೆ.
ಪ್ರಸ್ತುತ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಕೋವಾಕ್ಸಿನ್ ಲಸಿಕೆ ಪಡೆದುಕೊಂಡವರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಂಡುಬಂದರೆ ನಾವು ಪರಿಹಾರ ನೀಡುವ ಜೊತೆಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕಲ್ಪಿಸುತ್ತೇವೆ ಎಂದು ವಾಗ್ದಾನ ನೀಡಿದೆ.