– 10 ವರ್ಷ ಬೀದಿ ಬದಿ, ಶೌಚ ಕೊಠಡಿ, ಹಟ್ಟಿಯಲ್ಲೇ ಜೀವನ
ಮಂಗಳೂರು: ಕಷ್ಟ, ನೋವುಗಳನ್ನು ದಿಟ್ಟವಾಗಿ ಎದುರಿಸಿ ಮೇಡಿಕಲ್ ಬಿಎಸ್‍ಸಿ ಪಡೆದು ತನ್ನ ಕರ್ಮಭೂಮಿಯಲ್ಲೇ ರಾಜಕೀಯ ಪ್ರವೇಶಿಸಿಸಿದ್ದ ಮಮತಾ ಇದೀಗ ಪಾವೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಪಾವೂರಿನ ಜನತೆ ತಮ್ಮ ಕಣ್ಣೆದುರೇ ಕಷ್ಟ ಪಟ್ಟು ಬೆಳೆದ ಮಮತಾಳನ್ನು ಇಂದು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆಯನ್ನಾಗಿ ಆರಿಸಿದ್ದಾರೆ. ಕಳೆದ 3-4 ಚುನಾವಣೆಗಳಲ್ಲಿ ಈ ವಾರ್ಡ್‍ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಗಳೇ ಜಯಗಳಿಸುತ್ತಿದ್ದರು. ಇದೇ ಮೊದಲ ಬಾರಿ ಬಿಜೆಪಿ ಬೆಂಬಲಿತ ಮಮತಾ ಅವರನ್ನು ತಮ್ಮ ಪ್ರತಿನಿಧಿಯಾಗಿ ಗ್ರಾ.ಪಂ.ಗೆ ಪಾವೂರಿನ ಜನತೆ ಮಹುಮತ ನೀಡಿ ಆಯ್ಕೆ ಮಾಡಿದ್ದಾರೆ.
ಉಡುಪಿ ಮೂಲದವರಾದ ಇವರ ತಂದೆ ಕೃಷ್ಣಪ್ಪ, ತಾಯಿ ಪ್ರೇಮ ವಲಸೆ ಕಾರ್ಮಿಕರಾಗಿ ಊರುರು ಸುತ್ತಿ ಬೀದಿ ಬದಿ ಡೇರೆ ಹಾಕಿ ಜೀವನ ನಡೆಸುತ್ತಿದ್ದರು. 1995ರ ಸಮಯ ಏಕಾಏಕಿ ಕಾಣೆಯಾದ ತಂದೆಯ ನೆನಪಲ್ಲೇ ತಾಯಿ ಪ್ರೇಮ ಹಾಗೂ ಅವರ ಮೂವರು ಮಕ್ಕಳಾದ ಶಿವ, ಬೋಜ ಮತ್ತು ಮಮತಾ ಉಳ್ಳಾಲ ಸಮೀಪದ ಪಜೀರು ಹಾಗೂ ಪಾವೂರು, ಇನೋಳಿಯ ರಸ್ತೆ ಬದಿ, ಶೌಚ ಕೊಠಡಿ, ದನದ ಹಟ್ಟಿಯಲ್ಲಿ ವಾಸವಾಗಿದ್ದರು. ಶಿವ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಅನಾರೋಗ್ಯದಿಂದಿದ್ದರೆ, ಬೋಜ ಹಾಗೂ ಮಮತಾ ಅವರನ್ನು ಸ್ಥಳೀಯ ಶಿಕ್ಷಕ ಮಧು ಮೇಷ್ಟು ತಮ್ಮದೇ ಮುತುವರ್ಜಿಯಲ್ಲಿ ಮಲಾರ್ ಪದವಿ ಶಾಲೆಗೆ ಸೇರಿಸಿದ್ದರು.
ಡೇರೆಯಲ್ಲೇ ವಾಸ
ಪತಿ ನಾಪತ್ತೆಯಾದ ದುಃಖದ ನಡುವೆಯೂ ತಾಯಿ ಪ್ರೇಮ ಸ್ಥಳೀಯ ಕೋರೆ, ಮನೆ ಮನೆ ತೆರಳಿ ಕಾರ್ಮಿಕರಾಗಿ ದುಡಿದು ವಿದ್ಯಾಭ್ಯಾಸ ನಡೆಸುವ ಮಕ್ಕಳ ಜತೆ ಡೇರೆಯಲ್ಲೇ ದಿನ ಕಳೆದಿದ್ದರು. 2006ರಿಂದ ಮಮತಾ ಅವರು ಮಚ್ಚಿನ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ದೇರಳಕಟ್ಟೆ ಮೊರಾರ್ಜಿ ದೇಸಾಯಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾಗಿದ್ದರು. ನಂತರ ಮಂಗಳೂರಿನ ಕೊಲಾಸೋ ವಿದ್ಯಾಸಂಸ್ಥೆಯಲ್ಲಿ ಲ್ಯಾಬ್ ಟೆಕ್ಟಿಷಿನ್ ಡಿಪ್ಲಮಾ ಪದವಿ ಪೂರೈಸಿದ್ದರು.
ಕೊಳಗೇರಿಯಲ್ಲಿದ್ದು ಮೆಡಿಕಲ್ ಬಿಎಸ್‍ಸಿ ಪದವಿ
ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ ಸ್ಥಳೀಯ ಪತ್ರಕರ್ತರ ಹಾಗೂ ದಾನಿಗಳ ಸಹಕಾರದಿಂದ ಬೆಂಗಳೂರಿಗೆ ಆಗಮಿಸಿದ ಮಮತಾ 4 ವರ್ಷಗಳ ಕಾಲ ಬೆಂಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, 2020ರಲ್ಲಿ ಮೆಡಿಕಲ್ ವಿಭಾಗದಲ್ಲಿ ಬಿಎಸ್‍ಸಿ ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಶಿಕ್ಷಣ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಬೆಂಗಳೂರಿನ ಆನೆಪಾಳ್ಯ ಎಂಬ ಕೊಳೆಗೇರಿ ಪ್ರದೇಶದಲ್ಲೇ ವಾಸಿಸುತ್ತಲೇ ಮಮತಾ ಅವರು ಮೆಡಿಕಲ್ ಬಿಎಸ್‍ಸಿ ಪದವಿಧರೆಯಾಗಿದ್ದಾರೆ ಎಂಬುದೇ ವಿಶೇಷ.
ನನ್ನ ಜೀವನ ನನಗೆ ಬದುಕುವ ಪಾಠ ಕಲಿಸಿದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆ, ಬಳಕೆಯಾಗದಿರುವುದರಿಂದಲೇ ಹಳ್ಳಿಯ ಜನರು ಬಡತನದಲ್ಲೇ ಕಳೆಯುವಂತಾಗಿದೆ. ನನಗೆ ನನ್ನ ಜೀವನ ರೂಪಿಸುವಂತಹ ಶಿಕ್ಷಣ ದೊರಕಿದ್ದರೇನಂತೆ ಗ್ರಾಮೀಣ ಜನತೆ ಇನ್ನೂ ತಮ್ಮ ಸ್ಪಷ್ಟ ಜೀವನ ರೂಪಿಸುವಂತಹ ವ್ಯವಸ್ಥೆಯಾಗಿಲ್ಲ. ಈ ನಿಟ್ಟಿನಲ್ಲಿ ನಾನು ಓಡಾಡಿ ಬೆಳೆದ ಹಳ್ಳಿಗೆ ಮತ್ತೆ ಹಿಂತಿರುಗುವ ಯೋಜನೆ ಮಾಡಿದೆ. ಪ್ರಸ್ತುತ ನನ್ನ ಯೋಜನೆಗೆ ರಾಜಕೀಯ ಬೆಂಬಲವೂ ಸಿಕ್ಕಿದೆ. ನಾನು ನಡೆದು ಬಂದ ಅಲೆಮಾರಿ ಜೀವನ, ಕಷ್ಟದ ದಾರಿ ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಸೆಯೊಂದಿಗೆ ರಾಜಕೀಯ ಪ್ರವೇಶಿಸಿದ್ದೇನೆ ಎಂದು ಪಾವೂರು ಗ್ರಾ.ಪಂ.ನ ನೂತನ ಸದಸ್ಯೆ ಮಮತಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.