– ಕೀಲ್ಬ್ಯಾಕ್ ನೋಡಿ ಬೆದರಿದ ಮಹಿಳೆ
ಮುಂಬೈ: ಕೀಲ್ಬ್ಯಾಕ್ ಹಾವು ಒಂದು ಕಾಂಡೋಮ್ ಒಳಗೆ ಸಿಕ್ಕಿಹಾಕಿಕೊಂಡು ಉಸಿರಾಡಲು ಒದ್ದಾಡಿದ ಘಟನೆ ಶನಿವಾರ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಶನಿವಾರ ಬೆಳಗ್ಗೆ ಸುಮಾರು 8.30ರ ವೇಳೆ ಗ್ರೀನ್ ಮೆಡೋಸ್ ಹೌಸಿಂಗ್ ಸೊಸೈಟಿ ಬಳಿ ಹಾವು ಕಾಂಡೋಮ್ ಒಳಗಡೆ ಸಿಲುಕಿಕೊಂಡು ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿತ್ತು. ಇದನ್ನು ನೋಡಿದ ಸ್ಥಳೀಯ ನಿವಾಸಿ ವೈಶಾಲಿ ತನ್ಹಾ ಅವರು ಉರಗ ತಜ್ಞ ಮಿತಾ ಮಾಲ್ವಂಕರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಹಾವು ಅಸಾಮಾನ್ಯ ರೀತಿಯಲ್ಲಿ ಚಲಿಸುತ್ತಿರುವುದನ್ನು ಮತ್ತು ಅದರ ತಲೆಯ ಮೇಲೆ ಪ್ಲಾಸ್ಟಿಕ್ ಚೀಲವೊಂದು ಮುಚ್ಚಿಕೊಂಡಿರುವುದನ್ನು ಕಂಡ ತನ್ಹಾ ಹಾವಿನ ತಲೆಯ ಮೇಲೆ ಕೊಳಕು ಕಾಂಡೋಮ್ ಸುತ್ತಿಕೊಂಡಿದೆ ಎಂದು ಗುರುತಿಸಿದ್ದಾರೆ. ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಮಾಲ್ವಂಕರ್ 2.5 ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ.
ಕಾಂಡೋಮ್‍ನಿಂದ ಹಾವಿಗೆ ಉಸಿರಾಟದ ಸಮಸ್ಯೆಯಾಗಿತ್ತು. ಕೀಲ್ಬ್ಯಾಕ್ ಹಾವನ್ನು ಹಿಡಿಯುವುದು ಸುಲಭದ ಕೆಲಸವಲ್ಲ. ಈ ಹಾವು ತೀಕ್ಷ್ಣವಾದ ಮತ್ತು ಸೂಜಿಯಂತಹ ಹಲ್ಲುಗಳನ್ನು ಹೊಂದಿದೆ. ಅದನ್ನು ಹಿಡಿಯಲು ಹೋದವರು ಜಾಗೃತಿಯಿಂದ ಇರಬೇಕು ಇಲ್ಲವಾದಲ್ಲಿ ಬಲಿಪಶುವಾಗುತ್ತಾರೆ ಎಂದು ತಿಳಿಸಿದರು.
ತಕ್ಷಣವೇ ಹಾವನ್ನು ಹೋಗಲು ಬಿಡದೇ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪಶುವೈದ್ಯ ಅಧಿಕಾರಿ ಡಾ. ಶೈಲೇಶ್ ಪೆಥೆ ಅವರಿಂದ ಹಾವಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಒತ್ತಡದ ಕೆಲವು ಗುಣಲಕ್ಷಣಗಳಿರುವುದು ಬಿಟ್ಟರೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದರು. ಇನ್ನೂ ಕಾಂಡೋಮ್ ಬಿಸಾಕಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಸಿದ್ದು, ತನಿಖೆ ನಡೆಸುತ್ತಿದ್ದಾರೆ.