ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ದೇವಿ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಇಂದು ತೆರೆದಿದೆ. ಬರೋಬ್ಬರಿ 77 ದಿನಗಳ ನಂತರ ತಾಯಿ ಮೂಕಾಂಬಿಕೆ ಭಕ್ತರಿಗೆ ದರ್ಶನ ಕೊಟ್ಟಿದ್ದಾಳೆ. ಬೆಳಗ್ಗೆ 5.30 ದೇವಸ್ಥಾನದಲ್ಲಿ ಭಕ್ತರಿಗೆ ದೇವರನ್ನು ಕಣ್ತುಂಬಿಕೊಳ್ಳಲು ಅವಕಾಶ ಕೊಡಲಾಯಿತು.
ಬೆಳ್ಳಂಬೆಳಗ್ಗೆ 5.30 ಕೊಲ್ಲೂರಿನ ಸ್ಥಳೀಯ ಭಕ್ತರು ಮೂಕಾಂಬಿಕೆಯನ್ನು ಕಣ್ತುಂಬಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಸರ್ಕಾರದ ನಿಯಮದಂತೆ ಭಕ್ತರಿಗೆ ಕೈಕಾಲು ತೊಳೆಯುವ, ಸ್ಯಾನಿಟೈಸ್ ಮಾಡಿ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸಿಬ್ಬಂದಿ ಭಕ್ತರನ್ನು ದೇವಸ್ಥಾನದ ಒಳಗೆ ಬಿಟ್ಟರು. ದೇವಸ್ಥಾನದ ಪ್ರಾಂಗಣದ ತುಂಬೆಲ್ಲಾ ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡಲಾಗಿತ್ತು.
Advertisement
Advertisement
ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ದೇಗುಲದ ಗರ್ಭಗುಡಿಯ ಸಮೀಪ ಭಕ್ತರಿಗೆ ಹೋಗುವ ಅವಕಾಶ ಇರಲಿಲ್ಲ. ಧ್ವಜಸ್ತಂಭದ ಸಮೀಪ ನಿಂತು ದೇವರನ್ನು ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಗರ್ಭಗುಡಿಯ ಸಮೀಪ ಪ್ರವೇಶಿಸಬೇಕಾದರೆ ಈ ಹಿಂದಿನ ನಿಯಮದಂತೆ ಶರ್ಟ್ ಮತ್ತು ಬನಿಯನ್ ಕಳಚಿ ಒಳ ಪ್ರವೇಶಿಸಬೇಕಿತ್ತು. ಹೊಸ ನಿಯಮದ ಪ್ರಕಾರ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಧ್ವಜಸ್ತಂಭದ ಕೆಳಭಾಗದಲ್ಲಿ ನಿಂತು ದೇವಿಯ ದರ್ಶನ ಮಾಡಿ ಮುಂದೆ ಸಾಗಿದರು.
Advertisement
ಕೊಲ್ಲೂರು ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಯಾವುದೇ ಗುಡಿಗಳಿಗೆ ಭೇಟಿ ಕೊಡುವ ಅವಕಾಶ ಭಕ್ತರಿಗೆ ಸದ್ಯಕ್ಕಿಲ್ಲ. ಮೂಕಾಂಬಿಕಾ ದೇವಿಯ ದರ್ಶನ ಮಾಡಿ ನೇರವಾಗಿ ದೇವಸ್ಥಾನದ ಪ್ರಾಂಗಣದ ಒಳಗೆ ಹಾಕಿದ ಬ್ಯಾರಿಕೇಡ್ ಮೂಲಕ ತೆರಳಿ ಆನೆ ಬಾಗಿಲ ಮೂಲಕ ದೇವಸ್ಥಾನದ ಹೊರಗೆ ತೆರಳುವ ವ್ಯವಸ್ಥೆಯನ್ನು ಮಾಡಲಾಗಿದೆ.
Advertisement
77 ದಿನದ ನಂತರ ದೇವರ ದರ್ಶನ ಮಾಡಿದ ಭಕ್ತರು ಪುನೀತರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಪ್ರತಿ ವಾರ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬರುತ್ತಿದ್ದೆವು. ಕಳೆದ ಎರಡು ತಿಂಗಳಿನಿಂದ ದೇವಸ್ಥಾನ ಬಂದ್ ಇದ್ದ ಕಾರಣ ದೇವಿಯ ದರ್ಶನ ಸಾಧ್ಯವಾಗಿರಲಿಲ್ಲ. ಈಗ ಮೊದಲಿಗರಾಗಿ ನಮ್ಮನ್ನು ಕರೆಸಿಕೊಂಡು ದೇವಿ ದರ್ಶನ ಕೊಟ್ಟಿದ್ದಾಳೆ. ನಮಗೆ ಬಹಳ ಖುಷಿಯಾಗಿದೆ ಎಂದರು.
ಮಧ್ಯಾಹ್ನದವರೆಗೆ 5 ಗಂಟೆ, ಮಧ್ಯಾಹ್ನದ ನಂತರ 3 ಗಂಟೆಗಳ ಕಾಲ ದೇವಸ್ಥಾನ ತೆರೆದಿರುತ್ತದೆ ಎಂದು ದೇವಸ್ಥಾನದ ಇಒ ಅರವಿಂದ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 5.30 ರಿಂದ 7.30, 10.30 ರಿಂದ 1.30ವರೆಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 3 ರಿಂದ ಸಂಜೆ 6 ರ ವರೆಗೆ ದೇವಿಯನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಬದಲಾವಣೆ ತನಕ ಈ ಅವಕಾಶ ಕಲ್ಪಿಸಲಾಗಿದೆ.