ಚೆನ್ನೈ: ಮಹಾರಾಷ್ಟ್ರ, ತೆಲಂಗಾಣ, ಬಿಹಾರ್ ಬಳಿಕ ತಮಿಳುನಾಡು ರಾಜಭವನಕ್ಕೂ ಕೊರೊನಾ ಕಾಲಿಟ್ಟಿದೆ. ಚೆನ್ನೈನಲ್ಲಿರುವ ಗವರ್ನರ್ ನಿವಾಸದಲ್ಲಿ 84 ಮಂದಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ವರದಿ ದೃಢವಾಗಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಸದ್ಯ ಕೊರೊನಾ ಪಾಸಿಟಿವ್ ವರದಿ ಬಂದಿರುವ ಯಾವುದೇ ಸಿಬ್ಬಂದಿ ಗವರ್ನರ್ ಅವರ ಸಂಪರ್ಕದಲ್ಲಿ ಇರಲಿಲ್ಲ. ಎಲ್ಲರೂ ರಾಜಭವನದ ಮುಖ್ಯ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ರಾಜಭವನದಲ್ಲಿ ಕೆಲಸ ಮಾಡುತ್ತಿದ್ದ ಕೆಲವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ 147 ಮಂದಿಯ ಸ್ವಾಬ್ ಟೆಸ್ಟ್ ನಡೆಸಲಾಗಿತ್ತು. ಇವರಲ್ಲಿ 84 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಸದ್ಯ ಎಲ್ಲಾ 84 ಸಿಬ್ಬಂದಿಯನ್ನು ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ರಾಜಭವನದಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ. ಇದುವರೆಗೂ ತಮಿಳುನಾಡಿನಲ್ಲಿ 1.86 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 3,144 ಮಂದಿ ಸಾವನ್ನಪ್ಪಿದ್ದಾರೆ. ದೇಶದ ಕೊರೊನಾ ಸೋಂಕಿನ ಪಟ್ಟಿಯಲ್ಲಿ ತಮಿಳುನಾಡು 2ನೇ ಸ್ಥಾನವನ್ನು ಪಡೆದಿದೆ. ಇದುವರೆಗೂ 1.31 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.