ಭೋಪಾಲ್: ಮಹಾಮಾರಿ ಕೊರೊನಾ ವೈರಸ್ ನಿಂದ ಅವಾಂತರಗಳು ಸೃಷ್ಟಿಯಾದರೆ, ಇತ್ತ ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮಧ್ಯಪ್ರದೇಶದ ಭೋಪಾಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಹೌದು. ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ 43 ವರ್ಷದ ಮಹಿಳೆಯೊಬ್ಬರು ಏಪ್ರಿಲ್ 6ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ನರ್ಸ್ ಒಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನ್ನ ಮೇಲೆ ಅತ್ಯಾಚಾರವಾದ ಬಳಿಕ ಮಹಿಳೆ ದೂರು ಕೂಡ ನೀಡಿದ್ದರು. ವೈದ್ಯರಿಗೆ ಈ ಬಗ್ಗೆ ಹೇಳಿಕೆ ನೀಡುವಾಗ ಆರೋಪಿಯನ್ನು ಕೂಡ ಗುರುತಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರ ನಡೆದ ಕೆಲವೇ ಗಂಟೆಗಳಲ್ಲಿ ಮಹಿಳೆಯ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿದೆ. ಗಂಭೀರತೆಯನ್ನು ಅರಿತು ಕೂಡಲೇ ಆಕೆಯನ್ನು ವೆಂಟಿಲೇಟರ್ ಗೆ ಸ್ಥಳಾಂತರ ಮಾಡಲಾಯಿತು. ಆದರೆ ಅದೇ ದಿನ ಸಂಜೆ ಆಕೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಸಂತೋಷ್(40) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನು ಭೋಪಾಲ್ ನ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.