ಕೊರೊನಾ ಸೋಂಕಿತರ ಮೇಲೆ ಈಗ ಬ್ಲ್ಯಾಕ್‌ ಫಂಗಸ್‌ ದಾಳಿ

Public TV
2 Min Read
CORONA 3

– ಕೊರೊನಾದಂತೆ ಇದು ಸಾಂಕ್ರಾಮಿಕ ಸೋಂಕು ಅಲ್ಲ
– 60ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು, 13 ಜನ ಸಾವು
– ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯ

ನವದೆಹಲಿ: ಜನವರಿ, ಫೆಬ್ರವರಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಬಹುದು ಎಂಬ ಎಚ್ಚರಿಕೆಯ ಬೆನ್ನಲ್ಲೇ ಈಗ ಕೋವಿಡ್‌ ಸೋಂಕಿತರಿಗೆ ಅಪರೂಪದ ಬ್ಲ್ಯಾಕ್‌ ಫಂಗಸ್‌ (ಶಿಲೀಂಧ್ರ) ಹೆಸರಿನ ಮತ್ತೊಂದು ಸೋಂಕು ದಾಳಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತನ್ನಲ್ಲಿ ದಾಖಲಾದ ಕೆಲ ಕೋವಿಡ್‌ 19 ರೋಗಿಗಳು ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ವರದಿ ಮಾಡಿದ ಬಳಿಕ ಇತರ ಹಲವಾರು ನಗರಗಳ ಆಸ್ಪತ್ರೆಗಳು ವರದಿ ಮಾಡಿದ್ದು ಆತಂಕಕ್ಕೆ ಕಾರಣವಾಗಿದೆ. ಮುಂಬೈ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ 60ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಮ್ಯುಕೋರ್‌ಮೈಕೋಸಿಸ್‌ ಎಂದು ಕರೆಯಲಾಗುವ ಅಪರೂಪದ ಸೋಂಕು ಹೊಸದಲ್ಲ. ಆದರೆ ಕೋವಿಡ್‌ 19 ಸಂದರ್ಭದಲ್ಲೇ ಕಾಣಿಸಿಕೊಂಡಿರುವುದರ ಜೊತೆ ಕೊರೊನಾ ಸೋಂಕಿತರು ಮತ್ತು ಸೋಂಕಿನಿಂದ ಗುಣಮುಖರಾದವರ ಮೇಲೆ ಹೆಚ್ಚು ದಾಳಿ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

COrona 3

ಸಾಂಕ್ರಾಮಿಕ ರೋಗವಲ್ಲ:
ಇದು ಸಾಂಕ್ರಾಮಿಕ ರೋಗವಲ್ಲ. ಇದು ಮಾನವರಿಂದ ಮಾನವರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಸೋಂಕಿಗೆ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ 9 ಮಂದಿ ಮತ್ತು ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.  ಈ ರೋಗಕ್ಕೆ ತುತ್ತಾದವರು ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿರುವುದು ಖಚಿತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಹೇಗೆ ಬರುತ್ತದೆ?
ಈ ಸೋಂಕು ಹೇಗೆ ಬೇಕಾದರೂ ದೇಹವನ್ನು ಪ್ರವೇಶಿಸಬಹುದು. ಗಾಯಗೊಂಡರೆ, ಸುಟ್ಟರೂ ಚರ್ಮದ ಮೂಲಕ ಸೋಂಕು ದೇಹವನ್ನು ಪ್ರವೇಶಿಸುತ್ತದೆ. ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುವ ಸೋಂಕು, ಬಳಿಕ ಇಡೀ ದೇಹಕ್ಕೆ ಆವರಿಸಿಕೊಳ್ಳುತ್ತದೆ.

ಇದು ಮೂಗಿನ ಮೂಲಕ ಪ್ರವೇಶಿಸಿ ನಂತರ ಕಣ್ಣುಗಳಿಗೆ ಹರಡುತ್ತದೆ. ಇದರಿಂದಾಗಿ ಕುರುಡುತನಕ್ಕೆ ಕಾರಣವಾಗಬಹುದು. ಇದು ಮೆದುಳಿಗೆ ಹರಡಿದರೆ ಮೆನಿಂಜೈಟಿಸ್‌ಗೆ ಕಾರಣವಾಗಬಹುದು. ಈ ಸೋಂಕು ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆ ಇದೆಯಾದರೂ, ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಇದರ ಪ್ರಭಾವ ಹೆಚ್ಚು ಎಂಬ ಅಂಶ ದೃಢಪಟ್ಟಿದೆ.

coronavirus vaccine Serum Institute COVID 19

ಲಕ್ಷಣ ಏನು?
ವಿಪರೀತ ತಲೆನೋವು, ಜ್ವರ, ಕಫ, ಎದೆನೋವು, ಉಸಿರಾಟದ ತೊಂದರೆ, ಸಿಂಬಳ ಕಪ್ಪು ಬಣ್ಣಕ್ಕೆ ತಿರುಗುವುದು, ಮೂಗು ಕಟ್ಟಿಕೊಳ್ಳುವುದು, ಕಣ್ಣಿನ ಊತ, ಮುಖದ ಒಂದು ಭಾಗ ಊತ, ಮೂಗು ಕಟ್ಟಿಕೊಳ್ಳುವುದು ಈ ಸೋಂಕಿನ ಲಕ್ಷಣವಾಗಿದೆ.

ಪಾರಾಗೋದು ಹೇಗೆ?
ಸಾಮಾಜಿಕ ಅಂತರ ಕಾಪಾಡುವುದು, ಆಗಾಗ ಕೈತೊಳೆದುಕೊಳ್ಳುವುದು, ಮಾಸ್ಕ್‌ ಧರಿಸುವ ಮೂಲಕ ರಕ್ಷಣೆ ಪಡೆಯಬಹುದು. ವೈದ್ಯರ ಬಳಿಗೆ ತೆರಳಿ ಆ್ಯಂಟಿ ಫಂಗಲ್‌ ಚಿಕಿತ್ಸೆ ಪಡೆದುಕೊಂಡರೆ ಪಾರಾಗಬಹುದು.

ಆರಂಭದಲ್ಲೇ ಸೋಂಕು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದರೆ ಕಾಯಿಲೆಯಿಂದ ಪಾರಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಸೋಂಕಿಗೆ ತುತ್ತಾದವರಲ್ಲಿ ಶೇ.54ರಷ್ಟುಜನರು ಸಾವನ್ನಪ್ಪುವ ಸಾಧ್ಯತೆ ಇದೆ  ಎಂದು 2005ರ ವರದಿ ಹೇಳಿದೆ.

Coronavirus testing

Share This Article
Leave a Comment

Leave a Reply

Your email address will not be published. Required fields are marked *