ಶಿವಮೊಗ್ಗ: ಕೊರೊನಾ ಸಮಸ್ಯೆಯನ್ನು ಮರೆಮಾಚಲು ಚೀನಾ ಭಾರತದ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ. ಚೀನಾ ವಿನಾಃ ಕಾರಣ ಭಾರತದ ತಂಟೆಗೆ ಬಂದರೆ ಸದೆ ಬಡಿಯುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಇದು ಪ್ರಪಂಚದ ದೃಷ್ಟಿಯಲ್ಲಿ ಕೋವಿಡ್ ಸಮಸ್ಯೆಯ ದಿಕ್ಕು ತಪ್ಪಿಸಲು ಚೀನಾ ಮಾಡಿರುವ ಕುತಂತ್ರವಾಗಿದೆ. ಚೀನಾದ ಸೈನಿಕರು ಗಡಿ ಭಾಗದಲ್ಲಿ ನಮ್ಮ 20 ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ವಿರುದ್ಧವಾಗಿ ನಮ್ಮ ಯೋಧರು ಸಹ 41 ಚೀನಾದ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದರು.
Advertisement
Advertisement
ಭಾರತ ಈಗಾಗಲೇ ಚೀನಾದ ಯಾವುದೇ ವಸ್ತು ಖರೀದಿಸದಂತೆ ತೀರ್ಮಾನ ಮಾಡಿದೆ. ಇದು ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಉಂಟಾಗಬಹುದು ಎಂಬ ದೃಷ್ಟಿಯಿಂದ ಭಾರತ ತೆಗೆದುಕೊಂಡಿರುವ ತೀರ್ಮಾನ ಚೀನಾಕ್ಕೆ ಗಾಬರಿ ಉಂಟುಮಾಡಿದೆ. ಇದರ ಜೊತೆಗೆ ಚೀನಾದ ಸಮೀಪವಿರುವ ನಮ್ಮ ಭೂಪಟದ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಹಿಂದಿನ ಸರ್ಕಾರಗಳು ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಮೋದಿ ನೇತೃತ್ವದ ಸರ್ಕಾರ ರಸ್ತೆ ಅಭಿವೃದ್ಧಿ ಮಾಡುತ್ತಿದೆ. ಭಾರತ ನಮ್ಮ ದೇಶದ ಮೇಲೆ ಯುದ್ಧ ಮಾಡುವ ಸಲುವಾಗಿ ರಸ್ತೆ ನಿರ್ಮಾಣ ಮಾಡುತ್ತಿದೆ ಎಂದು ಚೀನಾ ತಪ್ಪಾಗಿ ಭಾವಿಸಿದೆ ಎಂದರು.
Advertisement
Advertisement
ಭಾರತ ಎಂದಿಗೂ ಕೂಡಾ ಪಾಕಿಸ್ತಾನ ಆಗಲಿ, ಚೀನಾದ ಮೇಲೆ ಆಗಲಿ ಅಥವಾ ಯಾವ ದೇಶದ ಮೇಲೆಯಾಗಲಿ ತಾನಾಗೇ ಯುದ್ಧ ಮಾಡಲು ಹೋಗುವುದಿಲ್ಲ. ಈ ಹಿಂದಿನ ಸರ್ಕಾರದ ವೇಳೆ ನಮ್ಮ ಸೈನಿಕರ ಜೀವಕ್ಕೆ ತೊಂದರೆ ಆದಾಗ ತಾತ್ಸಾರ ಮನೋಭಾವನೆ ಇತ್ತು. ವಿಶ್ವಸಂಸ್ಥೆ ಕೇಳಬೇಕು ಎಂಬುದಿತ್ತು. ಆದರೆ ಈಗ ಹಾಗಿಲ್ಲ. ನಮ್ಮ ಸೈನಿಕರಿಗೆ ಎದುರಾಳಿ ರಾಷ್ಟ್ರದ ಸೈನಿಕರು ಹೊಡೆದರೆ ನಮ್ಮ ಸೈನಿಕರು ಸಹ ಹೊಡೆಯಬಹುದು. ಆ ಸ್ವಾತಂತ್ರ್ಯ ಇದೀಗ ನಮ್ಮ ಸೈನ್ಯಕ್ಕೆ ಇದೆ. ಈಗಾಗಿ ನಮ್ಮ ಸೈನಿಕರು ಸಹ ಆತ್ಮ ವಿಶ್ವಾಸದಿಂದ ಇದ್ದಾರೆ ಎಂದು ತಿಳಿಸಿದರು.
ಭಾರತ ಏನು ಎಂಬುದು ಇಡಿ ಪ್ರಪಂಚಕ್ಕೆ ಗೊತ್ತು. ಭಾರತ ಯಾವ ರಾಷ್ಟ್ರಕ್ಕೂ ತೊಂದರೆ ಕೊಡುವುದಿಲ್ಲ. ಆದರೆ ಭಾರತದ ಸುದ್ದಿಗೆ ಬಂದರೆ ಬಿಡುವುದಿಲ್ಲ. ಈಗಾಗಿ ಭಾರತದ ಶಕ್ತಿ ಚೀನಾಗೂ ಗೊತ್ತಿದೆ. ಮೋದಿ ಪ್ರಧಾನಿ ಆಗುವ ಮೊದಲು ಪ್ರಪಂಚದ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನ ಹಾಗೂ ಚೀನಾದ ಪರ ಇದ್ದವು. ಆದರೆ ಈಗ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ಇವೆ. ಪಾಕಿಸ್ತಾನ ಹಾಗೂ ಚೀನಾ ಒಬ್ಬಂಟಿಯಾಗಿವೆ. ಈಗಾಗಿ ಚೀನಾ ಯುದ್ಧಕ್ಕೆ ಬರುವ ಧೈರ್ಯ ಇಲ್ಲ ಅನಿಸುವುದಿಲ್ಲ. ಒಂದು ವೇಳೆ ಚೀನಾ ಬಂದರೆ ಇಡೀ ವಿಶ್ವ ಭಾರತದ ಜೊತೆಗೆ ನಿಲ್ಲುತ್ತೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.