ಬೆಂಗಳೂರು: ಕೊರೊನಾ ಸಮಯದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಒಪ್ಪಿಕೊಂಡಿದ್ದಾರೆ.
ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 3 ವರ್ಷಗಳಲ್ಲಿ 377 ಬಾಲ್ಯ ವಿವಾಹಗಳು ಆಗಿವೆ. 2017-18 ರಲ್ಲಿ 102, 2018-19 ರಲ್ಲಿ 119 ಹಾಗೂ 2019-20 ರಲ್ಲಿ 156 ಬಾಲ್ಯ ವಿವಾಹಗಳಾಗಿವೆ. ಕೊರೊನಾ ಸಮಯದಲ್ಲಿ ಬಾಲ್ಯ ವಿವಾಹ ಜಾಸ್ತಿ ಆಗಿರೋದು ಗಮನಕ್ಕೆ ಬಂದಿದೆ ಎಂದರು.
ಕೊರೊನಾ ಸಮಯದಲ್ಲಿ ಬಾಲ್ಯ ವಿವಾಹ ತಡೆಗೆ ಕ್ರಮ ತೆಗೆದುಕೊಂಡಿದ್ದೆವು. ಗೃಹ ಇಲಾಖೆ, ನಮ್ಮ ಇಲಾಖೆ ಸೇರಿ ವಿವಿಧ ಇಲಾಖೆ ಸಹಕಾರದಲ್ಲಿ ಬಾಲ್ಯ ವಿವಾಹ ತಡೆಗೆ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮ ತೆಗೆದುಕೊಂಡು ಬಾಲ್ಯ ವಿವಾಹ ತಡೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.