ಉಡುಪಿ: ಕೊರೊನಾ ಸಂಕಷ್ಟ ಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠ ಸಾಲ ಮಾಡಲು ಮುಂದಾಗಿದೆ. ಮಠದ ನಿರ್ವಹಣೆಗೆ ಒಂದು ಕೋಟಿ ರೂ. ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಕೃಷ್ಣಮಠ ಸಾಲ ಮಾಡಲು ಮುಂದಾಗಿದ್ದು ಮಠದ ಭಕ್ತರಿಗೆ ನೋವುಂಟು ಮಾಡಿದೆ.
ಉಡುಪಿ ಕೃಷ್ಣಮಠದ ಪರ್ಯಾಯ ಅದಮಾರು ಮಠ ಕಳೆದ ಐದು ತಿಂಗಳಿಂದ ತೆರೆದಿಲ್ಲ. ಯಾವುದೇ ಧಾರ್ಮಿಕ ಸೇವೆ ನಡೆಯದೆ ಆರ್ಥಿಕ ಚಟುವಟಿಕೆ ಆರಂಭವಾಗಿದೆ. ದಿನಕ್ಕೆ ಒಂದೂವರೆ ಲಕ್ಷ ರೂ. ಖರ್ಚು ಬರುತ್ತಿದೆ. ಈ ಬಗ್ಗೆ ಪರ್ಯಾಯ ಅದಮಾರು ಮಠಾಧೀಶ ಈಶಪ್ರೀಯ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಕೊರೊನಾ ಕಾಲದಲ್ಲಿ ಹಲವಾರು ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ದೊಡ್ಡ ಕಂಪನಿಗಳು ಕೂಡ ನಷ್ಟದಲ್ಲಿದೆ. ನಿರ್ವಹಣೆ ಮಾಡಲು ಸಾಧ್ಯವಾಗದಷ್ಟು ಸಮಸ್ಯೆಗಳಲ್ಲಿ ಜನ ಇದ್ದಾರೆ. ಪ್ರತಿವರ್ಷ ಮಠದಿಂದ ಶೈಕ್ಷಣಿಕ ಸಂಸ್ಥೆಗಳಿಗೆ ಹಣದ ಹರಿವು ಹೋಗುತ್ತಿದ್ದು. ಶಿಕ್ಷಣ ಸಂಸ್ಥೆಗಳಿಂದ ಈವರೆಗೆ ಹಣವನ್ನು ಮಠದ ಬಳಕೆಗೆ ಉಪಯೋಗ ಮಾಡಿಲ್ಲ. ಇದನ್ನೂ ಓದಿ:ಕೋವಿಡ್‌ನಿಂದ ದೇವಾಲಯದ ಆದಾಯಕ್ಕೆ ಭಾರೀ ಹೊಡೆತ- ಕಳೆದ ವರ್ಷ ಎಷ್ಟು? ಈ ವರ್ಷ ಎಷ್ಟು ಬಂದಿದೆ?
ಅದಮಾರು ಮಠದ ವಿದ್ಯಾ ಸಂಸ್ಥೆಗಳು ಇವೆ. ಅಲ್ಲಿಂದ ಹಣವನ್ನು ತೆಗೆದುಕೊಂಡು ಬಳಕೆ ಮಾಡಬಹುದಲ್ಲ ಎಂಬ ಸಾಕಷ್ಟು ಅಭಿಪ್ರಾಯಗಳು ಬಂದವು. ಯಾವುದೇ ಕಾರಣಕ್ಕೂ ವಿದ್ಯಾಸಂಸ್ಥೆಗಳ ಹಣವನ್ನು ಮಠದ ಉಪಯೋಗಕ್ಕೆ ನಾವು ಬಳಸುವುದಿಲ್ಲ. ಅದಮಾರು ಮಠದ ಬಳಿ, ಕೃಷ್ಣಮಠದಲ್ಲಿ ಸಂಪತ್ತು ಇದ್ದರೂ ಕೂಡ ಅದೆಲ್ಲವನ್ನು ವಿನಿಯೋಗಪಡಿಸಲು ಸಾಧ್ಯವಿಲ್ಲ. ಮೂಲಧನವನ್ನು ಪ್ರತಿನಿತ್ಯದ ಖರ್ಚಿಗೆ ನಾವು ವಿನಿಯೋಗಿಸುವುದು ಇಲ್ಲ ಎಂದರು.
ಅದಮಾರು ಮಠದ ಸಿಬ್ಬಂದಿಗಳಿಗೆ ನಾವು ಕೊರೊನಾ ಕಾಲದಿಂದಲೂ ಸಂಬಳವನ್ನು ಚಾಚೂ ತಪ್ಪದೆ ಕೊಡುತ್ತಿದ್ದೇವೆ. ನಮ್ಮ ಪರ್ಯಾಯ ಮುಗಿದ ನಂತರವೂ ಅವರು ನಮ್ಮ ಸಿಬ್ಬಂದಿಗಳಾಗಿರುತ್ತಾರೆ. ಬಹಳ ಶ್ರದ್ಧೆಯಿಂದ ದುಡಿಯುವ ಸುಮಾರು ಜನ ವಿದ್ವಾಂಸರುಗಳು ನಮ್ಮ ಜೊತೆ ಇದ್ದಾರೆ. ಅವರಿಗೆ ಮಠದಿಂದ ಹೊರಗೆ ಹೋಗಿ ಕೆಲಸ ಮಾಡುವ ಅವಕಾಶಗಳು ಇದ್ದರೂ ಕೂಡ ಅವರು ಬದ್ಧತೆಯಿಂದ ಕೃಷ್ಣಮಠ ಮತ್ತು ಅದಮಾರು ಮಠದ ಜೊತೆ ಇದ್ದಾರೆ. ಅವರು ಸಾಕಷ್ಟು ತ್ಯಾಗವನ್ನು ಮಾಡಿ ದೇವರ ಸೇವೆಯನ್ನು ಮಾಡುತ್ತಿದ್ದಾರೆ. ಸಿಬ್ಬಂದಿಗಳ ಜೊತೆ ನಾವು ಇರುವುದು ಕೂಡ ಬಹಳ ಮುಖ್ಯ. ಇರುವ ಸಂಪತ್ತನ್ನು ಖಾಲಿ ಮಾಡುವುದು ಬಹಳ ಸುಲಭ. ಸಾಲ ಅನ್ನೋದು ಒಂದು ಎಚ್ಚರಿಕೆ. ನಾವು ಸಾಲ ಮಾಡಿದರೆ ನಮ್ಮ ಮನಸ್ಸು ಬಹಳ ಎಚ್ಚರಿಕೆಯಿಂದ ಇರುತ್ತದೆ. ಧಾರ್ಮಿಕ ಸಂಸ್ಥೆಯಲ್ಲಿ ಒಂದು ಕಾಳು ಕೂಡ ವ್ಯತ್ಯಾಸವಾಗದಂತೆ ಮುತುವರ್ಜಿವಹಿಸಿ ತೆಗೆದುಕೊಂಡ ಜವಾಬ್ದಾರಿಯಿಂದ ಹಿಂದಿರುಗಿಸುತ್ತೇವೆ ಎಂದು ಹೇಳಿದರು.