– ಲಕ್ಷಾಂತರ ರೂ. ವಂಚಿಸಿದ ತಂಡ
ಹಾಸನ: ಕೊರೊನಾ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡ ಪೂಜಾರಿಗಳ ತಂಡ, ನಿಮಗೆ ಆಗದವರು ನಿಮ್ಮ ಜಮೀನಿನಲ್ಲಿ ಹಂದಿ ತಲೆ ಹೂತಿಟ್ಟು ಮಾಟ ಮಾಡಿಸಿದ್ದಾರೆ. ತಲೆಯನ್ನು ನಾವು ಹೊರ ತೆಗೆದು ಮಾಟದಿಂದ ಮುಕ್ತಿ ಕೊಡಿಸುತ್ತೇವೆ ಎಂದು ವಂಚಿಸುತ್ತಿದೆ.
ಜಿಲ್ಲೆಯ ಗಾಣಿಗರ ಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ತಂಡವನ್ನು ಗ್ರಾಮಸ್ಥರು ಪತ್ತೆಹಚ್ಚಿದ್ದಾರೆ. ದೇವರ ವಿಗ್ರಹದೊಂದಿಗೆ ಆಗಮಿಸಿದ ದಿಲೀಪ್, ತಾನೇ ತಂದಿರುವ ಹಂದಿ ತಲೆಯನ್ನು ಮೊದಲೇ ಹೂತಿಟ್ಟು, ನಂತರ ಅದೇ ಜಾಗದಲ್ಲಿ ಗುಂಡಿ ತೆಗೆಸಿ ಮಾಟ ಮುಕ್ತಗೊಳಿಸಿದ್ದೇನೆ ಎಂದು ವಂಚಿಸುತ್ತಿದ್ದ.
Advertisement
Advertisement
ಇದೇ ರೀತಿ ಗ್ರಾಮದ ಹಲವರ ಮನೆಯಲ್ಲಿ ಮಾಟದಿಂದ ಮುಕ್ತಿಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ. ಮೊದಲೇ ಕೊರೊನಾದಿಂದ ಸರಿಯಾದ ಆದಾಯ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಜನ ದಿಲೀಪನ ಮಾತುಗಳನ್ನು ನಂಬಿ ಮೋಸ ಹೋಗಿದ್ದರು. ಅದೇ ರೀತಿ ಇಂದು ಸಹ ಮಾಟ ಪರಿಹಾರಕ್ಕಾಗಿ ವ್ಯಕ್ತಿಯೊಬ್ಬರ ಮನೆಗೆ ದಿಲೀಪ್ ಬಂದಿದ್ದಾನೆ. ಈ ವೇಳೆ ಅನುಮಾನ ಬಂದ ಗ್ರಾಮಸ್ಥರು ದಿಲೀಪ್‍ನನ್ನು ಹಿಡಿದು ಆತ ಮೊದಲೇ ತಂದಿದ್ದ ಹಂದಿ ತಲೆ ಪತ್ತೆಹಚ್ಚಿ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.