ನವದೆಹಲಿ: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಶೀಘ್ರದಲ್ಲಿ ಒಂದು ವರ್ಷ ಪೂರೈಸಲಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಬೃಹತ್ ಸಮಾವೇಶಗಳು ಹಮ್ಮಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ವರ್ಚ್ಯುಯಲ್ ಸಮಾವೇಶಗಳನ್ನು ನಡೆಸಲು ನಿರ್ಧರಿಸಿದೆ.
ಕೊರೊನಾ ನಡುವೆ ಸದ್ಯ ವರ್ಷಾಚರಣೆಗೆ ಸಿದ್ಧವಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಘಟಕಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತ್ಯೇಕ ವರ್ಚ್ಯುಯಲ್ ಸಮಾವೇಶಗಳನ್ನು ನಡೆಸುವ ತೀರ್ಮಾನಕ್ಕೆ ಬರಲಾಗಿದ್ದು, ದೇಶಾದ್ಯಂತ 750, ರಾಜ್ಯ ಘಟಕಗಳು ತಲಾ 1 ಸಾವಿರ ವರ್ಚ್ಯುಯಲ್ ಸಮಾವೇಶಗಳನ್ನು ಮಾಡುವಂತೆ ಸೂಚಿಸಲಾಗಿದೆ.
ಪ್ರತಿ ವರ್ಚ್ಯುಯಲ್ ಸಮಾವೇಶದಲ್ಲೂ ಕನಿಷ್ಠ 750 ಜನರು ಇರುವಂತೆ ನೋಡಿಕೊಂಡು ರಾಜ್ಯಗಳ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸುವಂತೆ ಹಾಗೂ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸೇಷನ್ ವಿತರಣೆ ಮಾಡುವಂತೆ ರಾಜ್ಯ ನಾಯಕರಿಗೆ ಜೆ.ಪಿ ನಡ್ಡಾ ಸೂಚನೆ ನೀಡಿದ್ದಾರೆ.