ಚಿಕ್ಕಬಳ್ಳಾಪುರ: ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡ್ತಾರೆ. ಆದರೆ ಈಗ ಯಾವುದೇ ಚುನಾವಣೆ ಇಲ್ಲದಿದ್ರೂ ಕೊರೊನಾ ಭಯದಿಂದ ಮನೆಯಿಂದಲೇ ಹೊರಬಾರದೆ ಇದ್ದ ಜನರಿಗೆ ಮನೆ ಮನೆಗೆ ಹೋಗಿ ಕೈ ಶಾಸಕರೊಬ್ಬರು ಧೈರ್ಯ ತುಂಬೋ ಕಾಯಕ ಮಾಡ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಕೊರೊನಾವನ್ನ ದಿಟ್ಟತನದಿಂದ ಎದುರಿಸುವಂತೆ ಸೋಂಕಿತರಿರುವ ಹೊಸಹುಡ್ಯ ಗ್ರಾಮದಲ್ಲಿ ಮನೆಮನೆಗೆ ಭೇಟಿ ನೀಡಿ ಧೈರ್ಯ ತುಂಬೋ ಕೆಲಸ ಮಾಡಿದರು. ಜನರೊಂದಿಗೆ ಬೆರೆತು ಪಂಕ್ತಿ ಭೋಜನ ಸವಿದ ಸುಬ್ಬಾರೆಡ್ಡಿ ಗ್ರಾಮದಲ್ಲೇ ಇಡೀ ದಿನ ಓಡಾಡಿ ಜನರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ರು.
Advertisement
Advertisement
ಎಲೆಕ್ಷನ್ ಸಮಯದಲ್ಲಿ ರಾಜಕಾರಣಿಗಳು ಬರ್ತಾರೆ ಅನ್ನೋ ಮಾತಿಗೆ ಅಪವಾದವೆಂಬಂತೆ ಶಾಸಕರು ಕೊರೊನಾ ಸೋಂಕಿತರ ಹೊಸಹುಡ್ಯ ಗ್ರಾಮಕ್ಕೆ ಭೇಟಿ ನೀಡಿ ಜನರ ಜೊತೆ ಬೆರೆತು ಕೊರೊನಾ ಕುರಿತು ಜನರಿಗಿದ್ದ ಭಯವನ್ನ ಹೋಗಲಾಡಿಸೋ ಕೆಲಸ ಮಾಡಿದರು. ಈಗ ಎಲ್ಲಿ ನೋಡಿದರೂ ಕೊರೊನಾದೇ ಸುದ್ದಿ. ಹೀಗಿರುವಾಗ ಯಾರಿಗಾದರೂ ಕೊರೊನಾ ಬಂದ್ರೆ, ಅವರನ್ನ ನೋಡೋ ದೃಷ್ಟಿನೇ ಬೇರೆ. ಇನ್ನೂ ಏರಿಯಾ, ಊರುಗಳಲ್ಲಿ ಕಾಣಿಸಿಕೊಂಡರೆ ಮುಗಿತು ಅನ್ನೋ ಮಟ್ಟಿಗೆ ಜನ ವರ್ತಿಸುತ್ತಾರೆ. ಅದರಲ್ಲೂ ಈ ಹೊಸಹುಡ್ಯ ಗ್ರಾಮದಲ್ಲಿ 08 ಮಂದಿಗೆ ಸೋಂಕು ತಗುಲಿದ್ದು, ಒಬ್ರು ಮೃತಪಟ್ಟಿದ್ರು.
Advertisement
ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆ ನಡೆಸುವ ವೇಳೆ ಕನಿಷ್ಠ ಗುಣಿ ಅಗೆಯೋಕೆ ಗ್ರಾಮದಲ್ಲಿನ ಜೆಸಿಬಿ ಮಾಲೀಕನೂ ಸಹ ಮುಂದೆ ಬಂದಿಲ್ಲವಂತೆ. ಇದರಿಂದ ಕೊರೊನಾ ಭಯದಿಂದ ಜನ ಮನೆಯಿಂದ ಹೊರಬರೋಕೆ ಹೆದರುತ್ತಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಜೊತೆಗೂಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸುಬ್ಬಾರೆಡ್ಡಿ ಧೈರ್ಯ ತುಂಬುವ ಕಾಯಕ ಮಾಡಿದ್ರು.
Advertisement
ಕೇವಲ ಹೊಸಹುಡ್ಯ ಗ್ರಾಮವಷ್ಟೇ ಅಲ್ಲದೇ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಶಾಸಕ ಸುಬ್ಬಾರೆಡ್ಡಿ, ಕೊರೊನಾ ಕುರಿತು ಜಾಗೃತವಾಗಿರುವಂತೆ ಅರಿವು ಮೂಡಿಸುವುದರ ಜೊತೆಗೆ ಮಾಸ್ಕ್ ವಿತರಣೆ ಮಾಡಿ ಕೊರೊನಾ ವಾರಿಯರ್ಸ್ ಜೊತೆ ಗಲಾಟೆ ಮಾಡಿಕೊಳ್ಳದೇ ಸೌಹಾರ್ದತೆಯಿಂದ ನಡೆದುಕೊಳ್ಳುವಂತೆ ಕಿವಿ ಮಾತು ಹೇಳ್ತಿದ್ದಾರೆ.
ಶಾಸಕರಿಗೆ ಆರೋಗ್ಯ ಇಲಾಖಾಧಿಕಾರಿಗಳು ಸಾಥ್ ನೀಡಿದ್ದು, ಅಗತ್ಯ ಔಷಧಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಅಂತ ಹೆದರಿಕೊಳ್ಳುವ ಈ ದಿನಗಳಲ್ಲಿ ಖುದ್ದು ಶಾಸಕರೇ ಕೊರೊನಾ ಸೋಂಕಿತರ ಗ್ರಾಮಗಳಿಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬೋ ಕೆಲಸ ಮಾಡ್ತಿರೋದು ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದು ಜನ ಮೆಚ್ಚುಗೆಗೂ ಪಾತ್ರರಗಿದ್ದಾರೆ.