– ವುಹಾನ್ನಲ್ಲಿ ವೈರಸ್ ಸೃಷ್ಟಿಯಾಗಿಲ್ಲ
– ಮೀನಿನ ಮೂಲಕ ವೈರಸ್ ಬಂದಿರಬಹುದು
ಬೀಜಿಂಗ್: ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿಸಿ, ಸುಳ್ಳು ಮಾಹಿತಿಗಳನ್ನು ನೀಡಿದ್ದ ಚೀನಾ ಈಗ ಕೊರೊನಾ ವಿಚಾರದಲ್ಲಿ ಅತಿ ದೊಡ್ಡ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.
ಕೊರೊನಾ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿಲ್ಲ. ಈ ವೈರಸ್‌ನ ಮೂಲ ಭಾರತ ಎಂದು ಹೇಳಿ ತನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆಯಲು ಮತ್ತೊಂದು ಸುಳ್ಳು ಹೇಳಿದೆ. 2019ರ ಬೇಸಿಗೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಅಶುದ್ಧ ನೀರಿನ ಮೂಲಕ ಮೊದಲು ವೈರಸ್ ಹರಡಿದೆ. ಈ ವೈರಸ್ ಹೇಗೋ ವುಹಾನ್ ತಲುಪಿದೆ ಎಂದು ಮೊಂಡುವಾದ ಮಂಡಿಸಿದೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್
ತನ್ನ ಮೇಲೆ ಬಂದಿರುವ ಕಳಂಕವನ್ನು ತೊಡೆದು ಹಾಕಲು ಚೀನಾ ಮಾಧ್ಯಮಗಳು ಈಗ ಕೊರೊನಾ ವಿಚಾರದಲ್ಲಿ ಸರಣಿ ಸುಳ್ಳು ವರದಿಗಳನ್ನು ಪ್ರಕಟಿಸಲು ಆರಂಭಿಸಿದ್ದು, ಭಾರತದಲ್ಲಿ ವೈರಸ್ ಸೃಷ್ಟಿಯಾಗಿದೆ ಎಂದು ಹೇಳಿದೆ.
ವಿಶ್ವದ ವಿವಿಧ ರಾಷ್ಟ್ರಗಳಿಂದ ಆಹಾರ ಉತ್ಪನ್ನಗಳನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಭಾರತದಿಂದ ಮೀನುಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ಚೀನಾಗೆ ವೈರಸ್ ಪ್ರವೇಶ ಆಗಿರುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಮೂಲ ಪತ್ತೆ ಹಚ್ಚಲು ಆರಂಭಿಸುತ್ತಿರುವಾಗಲೇ ಚೀನಾ ಮಾಧ್ಯಮಗಳು ಈ ವರದಿ ಪ್ರಕಟಿಸುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ
ಮೊಂಡುವಾದ ಏನು?
ಕೊರೊನಾ ವೈರಸ್‌ನ ಮೂಲ ಚೀನಾ ಅಲ್ಲವೇ ಅಲ್ಲ. ಅಮೆರಿಕ, ಆಸ್ಟ್ರೇಲಿಯಾ, ಭಾರತ, ಇಟಲಿ, ರಷ್ಯಾ, ಚೆಕ್ ಗಣರಾಜ್ಯ , ಸರ್ಬಿಯಾ ಆಗಿರಬಹುದು. ಈ ವಾದಕ್ಕೆ ಪೂರಕ ಅಂಶ ಎಂಬಂತಗೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕಡಿಮೆ ರೂಪಾಂತರದ ವೈರಸ್ ಮಾದರಿಗಳು ಪತ್ತೆಯಾಗಿವೆ. ಈ ಕಾರಣಕ್ಕೆ ಈ ದೇಶಗಳಲ್ಲಿ ಕೊರೊನಾ ವೈರಸ್ ಆರಂಭದಲ್ಲಿ ಪತ್ತೆ ಆಗಿರಬಹುದು.
ನೀರಿನ ಕೊರತೆಯಿಂದ ಮಂಗಗಳಂತಹ ಜೀವಿಗಳು ಕಾದಾಟದಲ್ಲಿ ತೊಡಗಿದ್ದಾಗ ಮಾನವರ ಮಧ್ಯಪ್ರವೇಶದಿಂದಾಗಿ ಈ ವೈರಸ್ ಹರಡಿರಬಹುದು. ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಮೊದಲೇ ಸರಿ ಇಲ್ಲ. ಅಷ್ಟೇ ಅಲ್ಲದೇ ಯುವಕರ ಸಂಖ್ಯೆ ಜಾಸ್ತಿ ಇರುವ ಕಾರಣ ವೈರಸ್ ಬಂದಿರುವ ವಿಚಾರ ಆರಂಭದಲ್ಲಿ ತಿಳಿದಿರಲಿಲ್ಲ ಎಂಬ ಮೊಂಡುವಾದವನ್ನು ಮಂಡಿಸಿದೆ. ಇದನ್ನೂ ಓದಿ:ಕೋವಿಡ್ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ
ಸುಳ್ಳು ಮೊದಲೆನಲ್ಲ:
ಗಲ್ವಾನ್ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾದ ನಡುವಿನ ಸಂಬಂಧ ಹಾಳಾಗಿದೆ. ಈ ಕಾರಣಕ್ಕೆ ಚೀನಾ ಈ ಸುಳ್ಳು ಹೇಳಿರಬಹುದು ಎಂದು ವಿಶ್ಲೇಷಿಸಲಾಗುತ್ತದೆ.
ಚೀನಾ ಈ ರೀತಿ ಸುಳ್ಳು ಹೇಳುವುದು ಮೊದಲೆನಲ್ಲ. ಅಮೆರಿಕದ ಟ್ರಂಪ್ ಸರ್ಕಾರ ಕೊರೊನಾ ವಿಚಾರದ ಬಗ್ಗೆ ವಿಶ್ವಕ್ಕೆ ಸರಿಯಾದ ಮಾಹಿತಿ ನೀಡದ್ದಕ್ಕೆ ಚೀನಾದ ವಿರುದ್ಧ ವಾಗ್ದಾಳಿ ನಡೆಸಿತ್ತು. ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಚೀನಾ, ಅಮೆರಿಕ ಸಂಶೋಧನೆಯಿಂದ ವುಹಾನ್ ಮಾರುಕಟ್ಟೆಗೆ ಬಂತು ಕೊರೊನಾ
ಇದಕ್ಕೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಈ ವೈರಸ್ ಚೀನಾದಲ್ಲಿ ಮೊದಲು ಸೃಷ್ಟಿಯಾಗಿಲ್ಲ ಮೊದಲು ಅಮೆರಿಕದಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಲು ಕೆಲವೊಂದು ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಒಂದು ಅಮೆರಿಕ ಸೇನೆಯ ಲ್ಯಾಬ್ ಒಂದು ಮುಚ್ಚಲ್ಪಟ್ಟಿತ್ತು. ಅಪಾಯಕಾರಿ ವಸ್ತುಗಳು ಇದೆ ಎನ್ನುವ ಕಾರಣಕ್ಕೆ ಅಮರಿಕ ಲ್ಯಾಬ್ ಅನ್ನು ಸ್ಥಗಿತಗೊಳಿಸಿತ್ತು ಎನ್ನುವ ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿ ಸುಳ್ಳನ್ನು ಸಮರ್ಥಿಸಿಕೊಂಡಿದ್ದರು.