– ಆದಿವಾಸಿಗಳಿಗೆ ಆಸರೆಯಾಗಿದೆ ಕುಲ ಕಸುಬು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭತ್ತದ ಕೊಯ್ಲು ಆರಂಭವಾದರೆ ಪೊರಕೆಗಳಿಗೆ ಬೇಡಿಕೆ ಹೆಚ್ಚುತ್ತದೆ. ನಾಪೋಕ್ಲು ಸಮೀಪದ ಬಲಮುರಿ ಗ್ರಾಮದ ಆದಿ ಕರ್ನಾಟಕ ಸಮುದಾಯದ 18ಕ್ಕೂ ಹೆಚ್ಚು ಕುಟುಂಬಗಳು ಹಲವು ವರ್ಷಗಳಿಂದ ಪೊರಕೆಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.
ಮನೆ ಪೊರಕೆ, ತಾಳೆ ಪೊರಕೆ ಹಾಗೂ ಕಡ್ಡಿ ಪೊರಕೆಗಳನ್ನು ತಯಾರಿಸುತ್ತಾರೆ. ನೆರೆಯ ಕೇರಳ ರಾಜ್ಯದ ಇರಿಟ್ಟಿಯ ಬೆಟ್ಟಗಳಿಂದ ಮಕ್ಕಿ, ಕುರುಂದೋಟಿ, ತಾಳೆ ಕಡ್ಡಿಗಳನ್ನು ತಂದು ಕಣ್ವ ಬಲಮುರಿಯಲ್ಲಿ ಪೊರಕೆಗಳನ್ನು ಸಿದ್ಧಪಡಿಸುತ್ತಾರೆ. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಪೊರಕೆಗಳನ್ನು ತಯಾರಿಸುತ್ತಾರೆ. ಮೊದಲು ಮನೆಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಇವರು, ಭತ್ತ ಕೆಲಸ ಪೂರೈಸಿದ ಬಳಿಕ ಭತ್ತವನ್ನು ರೈತರಿಂದ ಪಡೆಯುವ ಸಂಪ್ರದಾಯ ಜಾರಿಯಲ್ಲಿತ್ತು. ಇದೀಗ ಹಣಕ್ಕೆ ಮಾರುತ್ತಿದ್ದಾರೆ. ಪೊರಕೆ ಒಂದಕ್ಕೆ 50 ರೂಪಾಯಿ ನಿಗದಿಪಡಿಸಿದ್ದಾರೆ.
Advertisement
Advertisement
ಈ ಮೂಲಕ ಹಿರಿಯರಿಂದ ಬಂದಿರುವ ಕಸುಬನ್ನು ಈಗಲೂ ಮುಂದುವರಿಸುತ್ತಿದ್ದಾರೆ. ಹತ್ತಾರು ಸಮಸ್ಯೆಗಳಿಂದ ಕಸುಬುದಾರರು ತಮ್ಮ ವೃತ್ತಿಯನ್ನೇ ಬಿಡುವಂತಾಗಿದೆ. ಈ ವರ್ಷ ಕೊರೊನಾ ಇದ್ದರೂ, ಬಾಡಿಗೆ ವಾಹನದ ಮೂಲಕ ಬೆಳಗ್ಗೆ ಕಾಡಿಗೆ ತೆರಳಿ ಸಂಜೆ ಹಿಂತಿರುಗಬೇಕು. ಕಾಡಿನಿಂದ ತಂದ ತಾಳಿಗಿಡಗಳನ್ನು ರಸ್ತೆ ಬದಿಯಲ್ಲಿ ಹರಡಿ ಬಿಸಿಲಿಗೆ ಒಣಗಿಸಿ, ಕಟ್ಟಿ ಮಾರಾಟ ಮಾಡುವುದಕ್ಕೆ ಅಧಿಕ ಶ್ರಮ ಬೇಕಾಗುತ್ತದೆ.
Advertisement
ಕೇರಳದ ಕಾಡಿಗೆ ವಾಹನ ಬಾಡಿಗೆ ಮಾಡಿಕೊಂಡು ಹೋಗಿ ಪೊರಕೆ ಕಡ್ಡಿಗಳನ್ನು ತಂದಿದ್ದೇವೆ. ಕೊರೊನಾ ಇದ್ದುದ್ದರಿಂದ ಅಲ್ಲಿ ಉಳಿಯಲೂ ಬಿಡಲಿಲ್ಲ. ಒಂದು ಲೋಟ ನೀರನ್ನು ಕೊಡಲು ಹಿಂದೆ ಮುಂದೆ ನೋಡಿದರು. ಇಷ್ಟೆಲ್ಲ ಕಷ್ಟಪಟ್ಟರೂ ಹೆಚ್ಚು ಹಣಕ್ಕೆ ಪೊರಕೆ ಮಾರುವುದಿಲ್ಲ. ಆದರೆ ಗ್ರಾಹಕರು ಪೊರಕೆಯ ದರ ಕೇಳಿ ಚೌಕಾಸಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಹಿಂದೆ ತಾಳೆ ಗಿಡಗಳು ಎಲ್ಲೆಂದರಲ್ಲಿ ಸಿಗುತ್ತಿದ್ದವು. ಇತ್ತೀಚೆಗೆ ದೂರ ತೆರಳಬೇಕಾಗಿದೆ. ಕಾಡಿನಿಂದ ಗಿಡಗಳನ್ನು ಕತ್ತರಿಸಿ ತರಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ. ಪೂರ್ವಜರಿಂದ ಬಂದ ಕಸುಬನ್ನು ಬಿಡುವಂತಿಲ್ಲ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹಿಡಿಕೆಯ ಪೊರಕೆಗಳು ಇವೆ. ಇವುಗಳನ್ನು ಹೊತ್ತು ಮಾರುವುದು ಕಷ್ಟಕರ. ಪ್ರತಿ ವರ್ಷ ಕಡ್ಡಿಗಳನ್ನು ಒಣಗಿಸಿಕೊಂಡು ತರುತ್ತಿದ್ದೆವು. ಆದರೆ ಲಾಕ್‍ಡೌನ್ ಪರಿಣಾಮ ಈ ಬಾರಿ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಕಷ್ಟಪಟ್ಟಿದ್ದೇವೆ. ಅಲ್ಲದೆ ಬಿಸಿಲು ಇಲ್ಲದೆ ಕಡ್ಡಿಗಳನ್ನು ಒಣಗಿಸುವುದು ಹಿಂಸೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಾಫಿ ಹಾಗೂ ಭತ್ತದ ಒಕ್ಕಣೆ ಸಮಯದಲ್ಲಿ ಇಂತಹ ಪೊರಕೆಗಳಿಗೆ ಬೇಡಿಕೆ ಹೆಚ್ಚಿದೆ. ಪೂರ್ವಿಕರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕಸುಬನ್ನು ಮಾಡುತ್ತಿದ್ದಾರೆ. ಕೊರೊನಾದಂತಹ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ವೃತ್ತಿ ಕೈ ಹಿಡಿದಿದೆ.