ತುಮಕೂರು: ಕೊರಟಗೆರೆ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮಿ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಅಪಾರ ಪ್ರಮಾಣದಲ್ಲಿ ಹಣ ಹಾಗೂ ಆಭರಣಗಳು ಕಾಣಿಕೆ ರೂಪದಲ್ಲಿ ಹರಿದು ಬಂದಿದೆ.
ಕಳೆದ 4 ತಿಂಗಳಿನಿಂದ 8 ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣವನ್ನು ಎಣಿಕೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ 49,89,780ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಾಣಿಕೆ ರೂಪದಲ್ಲಿ ಲಭಿಸಿದೆ. ಆಭರಣಗಳ ಪೈಕಿ ಬಂಗಾರದ ತಾಳಿ 6, ನತ್ತು 3, ಬೆಳ್ಳಿಯ ಲಕ್ಷ್ಮೀ ಮುಖವಾಡ 1, ಬಳೆ 1, ಬಿಸ್ಕತ್ತು 2, ಕಾಲುಚೈಲು 4, ಲಕ್ಷ್ಮಿನಾಣ್ಯ 1, ಕಾಲುಂಗರ 2, ತಾಳಿ 2, ಕಣ್ಣು 2, ನಾಗಪ್ಪ ವಿಗ್ರಹ 1 ಸೇರಿ ಲಕ್ಷಾಂತರ ರೂ. ಮೌಲ್ಯದ ಒಡವೆಗಳು ಕಾಣಿಕೆ ಹುಂಡಿಯಲ್ಲಿ ದೊರೆತಿವೆ.
ಕೊರೋನಾ ಹಿನ್ನೆಲೆಯಲ್ಲಿ ಮಾರ್ಚ್‍ನಿಂದ ಜುಲೈ 07ರವರಗೆ ದೇವಸ್ಥಾನ ಬಂದ್ ಮಾಡಲಾಗಿತ್ತು. ಜುಲೈ 08ರಿಂದ ಪುನಃ ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಅಲ್ಲಿಂದ ನವೆಂಬರ್ ಅಂತ್ಯದವರೆಗೆ ಬರೋಬ್ಬರಿ 50 ಲಕ್ಷ ರೂ ಸಂಗ್ರವಾಗಿದೆ.
ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ನಡೆದ ಹುಂಡಿ ಹಣ ಎಣಿಕೆಯನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿದೆ. ಎಣಿಕೆ ವೇಳೆ ಕೋಳಾಲ ಉಪತಹಶೀಲ್ದಾರ್ ಮಧುಸೂಧನ್, ಆಹಾರ ಶಿರಸ್ತೆದಾರ್ ನರಸಿಂಹಮೂರ್ತಿ ಹಾಜರಿದ್ದರು. 40ಕ್ಕೂ ಅಧಿಕ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಮಹಾಲಕ್ಷ್ಮಿ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗಿಯಗಿದ್ದರು.