ಮಂಡ್ಯ: ಕೊರೊನಾ ವಿಚಾರದಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸರ್ಮಥವಾಗಿ ನಿಭಾಯಿಸುತ್ತಿವೆ, ದೂಷಿಸುವುದು ಸರಿಯಲ್ಲ ಎಂದು ಮಾಧ್ಯಮದ ವಿರುದ್ಧ ಮಾತನಾಡುವವರಿಗೆ ಮಾಜಿ ಸಚಿವ ಪುಟ್ಟರಾಜು ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಪಾಂಡವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾದ ವಸ್ತುಸ್ಥಿತಿಯನ್ನು ಮಾಧ್ಯಮಗಳು ಸರಿಯಾಗಿ ಬಿತ್ತರಿಸುತ್ತಿವೆ. ಮಾಧ್ಯಮಗಳು ಸರಿಯಾಗಿ ಕೆಲಸ ಮಾಡದಿದ್ದರೆ ನಾವು ಎಲ್ಲಿ ಇರುತ್ತಿದ್ದೆವೋ ಊಹಿಸಲು ಸಾಧ್ಯವಿಲ್ಲ. ಕೊರೊನಾ ಹತೋಟಿಗೆ ತರಲು ಮಾಧ್ಯಮಗಳು ಸಹಾಯ ಮಾಡುತ್ತಿವೆ ಎಂದರು.
ಕೊರೊನಾ ನೋವನ್ನು ಅನುಭವಿಸಿದ್ದವರನ್ನು ಕೇಳಿದ್ದರೆ ತಿಳಿಯುತ್ತದೆ. ಹಾದಿ, ಬೀದಿಯಲ್ಲಿ ಓಡಾಡೋರು ಉಡಾಫೆಯಿಂದ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ಅಂತಹವರ ಮಾತಿಗೆ ಮಾಧ್ಯಮದವರು ತಲೆ ಕೆಡಿಸಿಕೊಳ್ಳಬಾರದು. ಸದ್ಯ ಬೆಂಗಳೂರು ಜನ ನಡುಗಿ ಹೋಗುತ್ತಿದ್ದಾರೆ, ನಿನ್ನೆ ಇದ್ದವರು ಇವತ್ತು ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾಧ್ಯಮಗಳ ಬಗ್ಗೆ ಯಾರೂ ಹುಡುಗಾಟಿಕೆಯ ಮಾತಾಗಳನ್ನು ಆಡಬಾರದು, ಮಾಧ್ಯಮದಲ್ಲಿ ಬರುವ ಮಾಹಿತಿಯನ್ನು ಸರ್ಕಾರ ಗ್ರಹಿಸಿಕೊಂಡು ಕೆಲಸ ಮಾಡಬೇಕು. ಈಗ ತಂದಿರುವ ರೂಲ್ಸ್ ನ್ನು ಸರ್ಕಾರ ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಲಾಕ್‍ಡೌನ್ ಮಾಡಬೇಕಾದ ಅನಿವಾರ್ಯ ಎದುರಾಗುತ್ತದೆ ಎಂದರು.