– 5 ಸಾವಿರ ಮಾಸ್ಕ್ ಹಂಚಿ ಮಾನವೀಯತೆ ಮೆರೆದ ಯುವ ಡಾಕ್ಟರ್
ಧಾರವಾಡ: ಜಿಲ್ಲೆಯಲ್ಲಿ ಒಬ್ಬರು ಯುವ ವೈದ್ಯರಿದ್ದಾರೆ. ಇವರು ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆಯನ್ನೇ ಪಡೆದಿಲ್ಲ. ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಸರ್ಕಾರ ನೀಡಿದ್ದ ಸಂಬಳವನ್ನೆಲ್ಲಾ ನೇರವಾಗಿ ಕೋವಿಡ್ ಕೆಲಸಕ್ಕೇ ನೀಡಿ ಜನರ ಪ್ರಶಂಸೆಗೆ ಪಾತ್ರನಾಗಿದ್ದಾರೆ.
ಹೌದು ಧಾರವಾಡದ ಕಮಲಾಪೂರ ನಿವಾಸಿಯಾದ 23 ವರ್ಷದ ಡಾ. ಮಯೂರೇಶ್ ಲೋಹಾರ್, ಕಳೆದ ಜುಲೈ ತಿಂಗಳಲ್ಲಿ ಬಿಎಎಂಎಸ್ ಮುಗಿಸಿ ನೇರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದರು. ಅಷ್ಟೊತ್ತಿಗಾಗಲೇ ದೇಶದಲ್ಲಿ ಕೊರೊನಾ ಹಾವಳಿ ಮಿತಿ ಮೀರಿ ಹೋಗಿತ್ತು. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹುತೇಕ ಸರ್ಕಾರಿ ಸೇವೆಯಲ್ಲಿರೋ ಜನರು ಕೆಲಸ ಮಾಡಲು ಹಿಂದೇಟು ಹಾಕೋ ಸಮಯದಲ್ಲಿಯೇ, ಇವರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.
Advertisement
Advertisement
ಕೆಲಸಕ್ಕೆ ಬಂದ ಕೂಡಲೇ ಇವರನ್ನು ಕೋವಿಡ್ ವಾರ್ಡಿಗೆ ಕೆಲಸಕ್ಕೆ ನಿಯೋಜಿಸಲಾಯಿತು. 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಸತತವಾಗಿ ಮೂರು ತಿಂಗಳ ಕಾಲ ಕೋವಿಡ್ ವಾರ್ಡ್ ನಲ್ಲಿಯೇ ಕೆಲಸ ಮಾಡಿದ ಡಾ. ಮಯೂರೇಶ, ತಮಗೆ ಬಂದ ಸಂಬಂಳದಿಂದ ಇದೀಗ ಎನ್-95 ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಡಾ. ಮಯೂರೇಶ್ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿಯೂ ಕೆಲಸ ಮಾಡಿ, ಅಲ್ಲಿ ಬಂದ ಸಂಬಳ ಹಾಗೂ ಸರ್ಕಾರಿ ಸಂಬಳವನ್ನು ಒಟ್ಟಾರೆ ಸೇರಿಸಿ, ಒಂದೂವರೆ ಲಕ್ಷ ರೂಪಾಯಿಯ ಮಾಸ್ಕ್ ಖರೀದಿಸಿ ಉಚಿತವಾಗಿ ಹಂಚಿದ್ದಾರೆ.
Advertisement
Advertisement
ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಬಳದಲ್ಲಿಯೇ ಸಮಾಜಕ್ಕೆ ಸಹಾಯ ಮಾಡುತ್ತಿರೋ ಇವರ ಸೇವೆಗೆ ಗೆಳೆಯರು ಸಾಥ್ ನೀಡಿದ್ದಾರೆ. ಒಟ್ಟು 5,000 ಎನ್ 95 ಹಾಗೂ 5,000 ಥ್ರೀ ಲೇಯರ್ ಮಾಸ್ಕ್‍ಗಳನ್ನು ಇದುವರೆಗೂ ಹಂಚಿರುವ ಈ ವೈದ್ಯ, ಶಾಲೆಗಳು ಆರಂಭವಾಗೋ ಸಾಧ್ಯತೆ ಇರುವುದರಿಂದ ಬಿಇಓ ಕಚೇರಿಗೆ 1,000, ಪೊಲೀಸ್ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿದಂತೆ ಧಾರವಾಡದ ವಿವಿಧ ಪ್ರದೇಶಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ನೀಡಿದ್ದಾರೆ.