ಕೊರೊನಾ ವಾರಿಯರ್ಸ್‌ಗೆ ಅಂಟಿಕೊಳ್ತು ವೈರಸ್ – ಒಂದೇ ದಿನ 6 ಪೊಲೀಸರಿಗೆ ಸೋಂಕು

Public TV
2 Min Read
POLICE 3

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಾರಿಯರ್ಸ್‌ಗೆ ವೈರಸ್ ಹಬ್ಬಿದೆ. ರಾಜ್ಯದ 6 ಮಂದಿ ಪೊಲೀಸರಿಗೆ ಕೊರೊನಾ ಬಂದಿದ್ದು, ಭಾರೀ ಆತಂಕ ಹೆಚ್ಚಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 2 ಸಾವಿರ ದಾಟಿದ್ದು, 2089ಕ್ಕೆ ಏರಿದೆ.

ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಹೆಗಲು ಕೊಟ್ಟ ಕೊರೊನಾ ವಾರಿಯರ್ಸ್ ಪೊಲೀಸರಿಗೆ ಸೋಂಕು ಹಬ್ಬಿದೆ. ತಾವು ಇದ್ದಲ್ಲಿಯೇ ಕೊರೊನಾ ಸೋಂಕು ಇವರನ್ನು ಆವರಿಸಿದೆ. ಹಗಲಿರುಳು ದುಡಿಯುವ, ಜನರ ಮಧ್ಯೆ ಇರುವ ವಾರಿಯರ್ಸ್‌ಗೆ ಸೋಂಕು ಹಬ್ಬಿದ್ದು ಆತಂಕಕ್ಕೆ ಕಾರಣವಾಗಿದೆ. ಉಡುಪಿಯಲ್ಲಿ ಮೂವರು, ಬೆಂಗಳೂರು, ದಕ್ಷಿಣ ಕನ್ನಡ, ಹಾಸನ, ತಲಾ ಒಬ್ಬರು ಪೊಲೀಸರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

corona 1 4

ಉಡುಪಿಯಲ್ಲಿ ಮೂರು ಪೊಲೀಸರಿಗೆ ಸೋಂಕು ತಗುಲಿದ್ದು ಟೆನ್ಶನ್ ಹೆಚ್ಚಾಗಿದೆ. ಮಹಾರಾಷ್ಟ್ರದಿಂದ ಬಂದವರು ಚೆಕ್ ಪೋಸ್ಟ್ ನಲ್ಲೋ, ಕಂಟೈನ್ಮೆಂಟ್ ಝೋನ್‍ನಲ್ಲೋ ಮೂವರಿಗೆ ಕೊರೊನಾ ಅಂಟಿಸಿದ್ದಾರೆ. ಬ್ರಹ್ಮಾವರ ಠಾಣೆ ಸಿಬ್ಬಂದಿ ಟೋಲ್‍ಗೇಟ್, ಚೆಕ್‌ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಜೆಕಾರು ಠಾಣೆ ಎಎಸ್‍ಐ ಹಾಗೂ ಕಾರ್ಕಳ ಠಾಣೆಯ ಪೊಲೀಸ್ ಕಾನ್ಟೇಬಲ್ ಕ್ವಾರಂಟೈನ್ ಸೆಂಟರ್ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡಿದ್ದರು. ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಇವರು ಫ್ರೇಜರ್ ಟೌನ್ ಟ್ರಾಫಿಕ್ ಪೊಲೀಸ್. ನಿತ್ಯ ಬೇರೆ ಬೇರೆ ಪಾಯಿಂಟ್‍ಗಳಲ್ಲಿ ಈ ಸಂಚಾರಿ ಪೊಲೀಸ್ ಕೆಲಸ ಮಾಡುತ್ತಿದ್ದರು. ಸೋಂಕಿತನ ಮೂಲ ಪತ್ತೆಯಾಗಿಲ್ಲ. ಹಾಗಾಗಿ ಟ್ರಾವೆಲ್ ಹಿಸ್ಟರಿ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪೇದೆ 93 ಜನರ ಜೊತೆ ಕೆಲಸ ಮಾಡಿದ್ದಾರೆ. ಇವರೆಲ್ಲರೂ ಪ್ರಾಥಮಿಕ ಸಂಪರ್ಕದವರಾಗಿದ್ದಾರೆ.

police a

ಹಾಸನ ನಗರದ ನಿವಾಸಿ ಬೆಂಗಳೂರಿನ ಕೆಎಸ್‌ಆರ್‌ಪಿ ಕಾನ್‍ಸ್ಟೇಬಲ್‌ಗೆ ಕೊರೊನಾ ವಕ್ಕರಿಸಿದೆ. ಇವರಿಗೆ ಬೆಂಗಳೂರಿಗೆ ಸರ್ಕಾರಿ ವಾಹನದಲ್ಲೇ ಕರ್ತವ್ಯ ನಿಮಿತ್ತ ಪ್ರಯಾಣ ಮಾಡಿ ಬಂದ ಟ್ರಾವೆಲ್ ಹಿಸ್ಟರಿ ಇದೆ. ಈ ಹಿನ್ನೆಲೆಯಲ್ಲಿ ಕಾನ್‍ಸ್ಟೇಬಲ್‌ ವಾಸವಿದ್ದ ಹಾಸನದ ಸತ್ಯವಂಗಲ ಏರಿಯಾ ಸೀಲ್‍ಡೌನ್ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆ. ಆದರೆ ಈ ಪೊಲೀಸ್‍ಗೆ ಕೊರೊನಾ ತಗುಲಿದ ರೀತಿಯೇ ವಿಚಿತ್ರ. ಮುಂಬೈಯಿಂದ ಬಂದ ವಿಟ್ಲದ ವ್ಯಕ್ತಿಯೊಬ್ಬನನ್ನು ಕ್ವಾರೆಂಟೈನ್‍ಗೆ ಕರೆದುಕೊಂಡು ಹೋಗುವ ಅಂಬುಲೆನ್ಸ್ ರಸ್ತೆ ಮಧ್ಯೆಯಲ್ಲೇ ಬಿಟ್ಟು ಹೋಗಿತ್ತು. ಇದರಿಂದ ಕೋಪಗೊಂಡ ಆತ ಸ್ಥಳೀಯ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿ ಅಲ್ಲಿ ತನ್ನ ಆಧಾರ್ ಕಾರ್ಡ್ ಕೊಟ್ಟಿದ್ದ. ಇದೇ ಆಧಾರ್ ಕಾರ್ಡ್ ಮೂಲಕ ಕೊರೊನಾ ಪೊಲೀಸ್ ಠಾಣೆಗೂ ಕಾಲಿಟ್ಟಿದೆ.

vlcsnap 2020 05 25 07h42m42s152

ಹಾಸನದಿಂದ ಮಡಿಕೇರಿಗೆ ಕೆಎಸ್‌ಆರ್‌ಪಿ ತುಕಡಿಯೊಂದಿಗೆ ಮಡಿಕೇರಿಗೆ ಆಗಮಿಸಿದ 20 ಜನ ಪೊಲೀಸರಲ್ಲಿ 4 ಜನ ಪೊಲೀಸರು ಹಾಸನ ಮೂಲದವರಾಗಿದ್ದು, ಎಲ್ಲರೂ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ರಾಜ್ಯದಲ್ಲಿ ಪೊಲೀಸರಿಗೆ ಸೋಂಕು ಬಹುಬೇಗವಾಗಿ ವ್ಯಾಪಿಸುತ್ತಿದ್ದು, ಸರ್ಕಾರ ಆದಷ್ಟು ಬೇಗ ಕೊರೊನಾ ವಾರಿಯರ್ಸ್‍ನ ಆರೋಗ್ಯದ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *