ನವದೆಹಲಿ: ತಮ್ಮ ತಾಯಿ ಹೀರಾಬೆನ್ ಅವರು ಲಸಿಕೆ ಪಡೆದಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತಮ್ಮ ತಾಯಿ ಲಸಿಕೆ ಪಡೆದಿರುವ ವಿಚಾರವನ್ನು ಹಂಚಿಕೊಂಡು ಅರ್ಹರು ಕೊರೊನಾ ಲಸಿಕೆ ಪಡೆದು ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
Happy to share that my mother has taken the first dose of the COVID-19 vaccine today. I urge everyone to help and motivate people around you who are eligible to take the vaccine.
— Narendra Modi (@narendramodi) March 11, 2021
ಟ್ವೀಟ್‍ನಲ್ಲಿ ಬರೆದಿರುವ ಅವರು, ನನ್ನ ತಾಯಿ ಇಂದು ಕೊರೊನಾ ಮೊದಲ ಡೋಸ್ ಲಸಿಕೆ ಪಡೆದಿರುವ ವಿಚಾರವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಅರ್ಹರು ಲಸಿಕೆ ಪಡೆಯುವಂತೆ ಸಹಾಯ ಮಾಡಿ, ಪ್ರೇರಣೆ ನೀಡಿ ಎಂದು ಈ ಮೂಲಕ ನಾನು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
ಮಾರ್ಚ್ 1ರಿಂದ 3ನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದ್ದು, ಹಿರಿಯ ನಾಗರಿಕರು ಹಾಗೂ ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
3ನೇ ಹಂತದ ಅಭಿಯಾನ ಆರಂಭವಾದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಏಮ್ಸ್‍ಗೆ ತೆರಳಿ ಲಸಿಕೆ ಪಡೆದಿದ್ದಾರೆ. ಈ ಮೂಲಕ ಇತರರಿಗೆ ಪ್ರೇರಣೆ ನೀಡಿದ್ದಾರೆ. ದೇಸಿಯ ಕಂಪನಿ ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆ ಪಡೆದು ಮಾದರಿಯಾಗಿದ್ದಾರೆ.
ಜನವರಿ 16ರಂದು ಭಾರತದಲ್ಲಿ ಎರಡು ಲಸಿಕೆಗಳಿಗೆ ಅನುಮತಿ ನೀಡಲಾಗಿದ್ದು, ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗೆ ಅನುಮತಿ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದ ಸೇರಂ ಇನ್‍ಸ್ಟಿಟ್ಯೂಟ್‍ನಲ್ಲಿ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ.