– ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಸಲಹೆ
ದಾವಣಗೆರೆ/ಉಡುಪಿ: ಇಂದು ಉಡುಪಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಹಿರಿಯ ಸರ್ಕಾರಿ ಸಿಬ್ಬಂದಿ ಕೊರೊನಾ ಲಸಿಕೆಯನ್ನು ಪಡೆದುಕೊಂಡರು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಉಡುಪಿ ಜಿಲ್ಲಾಧಿಕಾರಿ ಕೆ.ಜಗದೀಶ್ ವ್ಯಾಕ್ಸಿನ್ ಪಡೆದು ಇತರರಿಗೆ ಧೈರ್ಯ ತುಂಬಿದರು.
ದಾವಣಗೆರೆ ನಗರದಲ್ಲಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಎಸ್‍ಪಿ, ಡಿಸಿಯವರೊಂದಿಗೆ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ರವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡು ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕುತ್ತಿರುವ ಜನಸಾಮಾನ್ಯರಿಗೆ ಸಂದೇಶ ರವಾನಿಸಿದರು. ಪೋಲಿಸ್ ಇಲಾಖೆ, ಕಂದಾಯ ಇಲಾಖೆ ಸೇರಿದ್ದಂತೆ ಇನ್ನಿತರೆ ಇಲಾಖೆಗಳ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ನೀಡಲು ತಯಾರಿ ನಡೆಯುತ್ತಿದೆ.
ಉಡುಪಿ: ಕೋವಿಶೀಲ್ಡ್ ಇಂಜೆಕ್ಷನ್ ಚುಚ್ಚಿಸಿಕೊಂಡರು. ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವ್ಯಾಕ್ಸಿನೇಶನ್ ಕೊಠಡಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯ್ತು. ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಎಸ್‍ಪಿ ಕುಮಾರ ಚಂದ್ರ, ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ನಗರಸಭೆ ಕಮಿಷನರ್ ಉದಯಕುಮಾರ್ ಶೆಟ್ಟಿ ಕೂಡಾ ಲಸಿಕೆ ಹಾಕಿಸಿಕೊಂಡರು.
ತಾಲೂಕಿನಲ್ಲಿ ತಹಶೀಲ್ದಾರರು, ಇಒಗಳು ವ್ಯಾಕ್ಸಿನೇಷನ್ ಪಡೆದುಕೊಳ್ಳಲಿದ್ದಾರೆ. ಮೂರು ದಿನದಲ್ಲಿ 4,040 ಜನರಿಗೆ ಲಸಿಕೆ ಹಾಕಲಾಗುತ್ತದೆ. ಮೊದಲ ದಿನ 593 ಜನಕ್ಕೆ ಲಸಿಕೆ ಹಾಕಲಾಗುತ್ತದೆ. ನಾವು ಮೊದಲು ತೆಗೆದುಕೊಂಡು ಕೊರೊನಾ ರಿಸ್ಕ್ ಕಡಿಮೆ ಮಾಡಬೇಕು. ಅಧಿಕಾರಿ ವರ್ಗ ಆರೋಗ್ಯವಾಗಿದ್ದು ರೋಗದ ವಿರುದ್ಧದ ಹೋರಾಟಕ್ಕೆ ಸಿದ್ಧವಾಗಿರಬೇಕು ಎಂಬ ಹಿನ್ನೆಲೆಯಲ್ಲಿ ನಾವೇ ಲಸಿಕೆ ಹಾಕಿಸಿಕೊಂಡಿದ್ದೇವೆ. ಇಂಜೆಕ್ಷನ್ ತೆಗೆದಕೊಂಡ ಮೇಲೆ ಯಾವುದೇ ವ್ಯತ್ಯಾಸ ಆಗಿಲ್ಲ. ಯಾರೂ ಲಸಿಕೆ ಪಡೆಯಲು ಹಿಂಜರಿಯೋದು ಬೇಡ. ಕೊರೋನಾದ ರಿಸ್ಕ್ ಗೆ ಹೋಲಿಸಿದ್ರೆ ಪಾಯಿಂಟ್ ಶೇ.1 ರಿಸ್ಕ್ ಇಲ್ಲ ಎಂದು ಡಿಸಿ ಜಿ. ಜಗದೀಶ್ ಹೇಳಿದರು.
ಕೊರೊನಾ ಬಂದವರಿಗೆ ಅವರ ಕುಟುಂಬಕ್ಕೆ ಲಸಿಕೆಯ ಬೆಲೆ ಗೊತ್ತಿರುತ್ತದೆ. ಕೊರೊನಾ ನಿವಾರಣೆಯಾಗಿದೆ ಎಂಬ ಮನೋಭಾವನೆಯಲ್ಲಿ ಜನ ಇದ್ದಾರೆ. ಆದರೆ ಕೊರೊನ ರೂಪಾಂತರ ಆಗುವ ಸಾಧ್ಯತೆ. ಇದೇ ಎಚ್ಚರಿಕೆಗೋಸ್ಕರ ಲಸಿಕೆಯನ್ನು ಪಡೆದುಕೊಳ್ಳಲೇಬೇಕು. ಸರ್ಕಾರದಿಂದ ಉಚಿತ ಲಸಿಕೆ ಸಿಕ್ಕಿರುವುದು ನಮ್ಮ ಅದೃಷ್ಟ ಎಂದು ಸಿಇಒ ಡಾ. ನವೀನ್ ಭಟ್ ಹೇಳಿದರು.
ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರು ಹಿಂಜರಿಯುವ ಅವಶ್ಯಕತೆ ಇಲ್ಲ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಫ್ರಂಟ್ ಲೈನ್ ವರ್ಕರ್ಸ್ ಎಲ್ಲರೂ ಆತಂಕವಿಲ್ಲದೆ ಲಸಿಕೆ ತೆಗೆದುಕೊಳ್ಳಿ ಎಂದು ಎಎಸ್‍ಪಿ ಕುಮಾರ ಚಂದ್ರ ಕರೆಕೊಟ್ಟರು.