ಚೆನ್ನೈ: 26 ವರ್ಷದ ಯುವತಿಯೊಬ್ಬಳು ತನ್ನ ಚಿಕ್ಕಮ್ಮ ಹಾಗೂ ಆಕೆಯ ಕುಟುಂಬಕ್ಕೆ ಕೋವಿಡ್-19 ಲಸಿಕೆ ನೀಡುವ ನೆಪದಲ್ಲಿ ನಿದ್ರೆ ಮಾತ್ರೆ ನೀಡಿ ಚಿನ್ನದ ಆಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿ ಯುವತಿಯನ್ನು ಸತ್ಯಪ್ರಿಯ ಎಂದು ಗುರುತಿಸಲಾಗಿದ್ದು, ಈಕೆ ಪೆರಂಬಲೂರು ಜಿಲ್ಲೆಯ ಕುನ್ನಂ ತಾಲೂಕಿನ ಕೀಜ್ಕುಡಿಕಾಡು ಗ್ರಾಮದ ನಿವಾಸಿಯಾಗಿದ್ದಾಳೆ. ಅಲ್ಲದೆ ಆನ್‍ಲೈನ್ ಮಾರ್ಕೆಟಿಂಗ್ ಏಜೆನ್ಸಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ.
ಗುರುವಾರ ಸತ್ಯಪ್ರಿಯ ತನ್ನ ಚಿಕ್ಕಮ್ಮ ಕೆ. ರಸತಿ ಮನೆಗೆ ತೆರಳಿದ್ದಾನೆ. ಈ ವೇಳೆ ಚಿಕ್ಕಮ್ಮ, ಚಿಕ್ಕಪ್ಪ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡಬಹುದಾ ಎಂದು ಕೇಳಿದ್ದಾಳೆ. ಇದಕ್ಕೆ ರಸತಿ ಅನುಮತಿ ನೀಡಿದ್ದು, ಸತ್ಯಪ್ರಿಯ ಲಸಿಕೆ ಹೆಸರಿನಲ್ಲಿ ನಿದ್ರೆ ಮಾತ್ರೆಯನ್ನು ನೀಡಿದ್ದಾಳೆ.
ಲಸಿಕೆ ಪಡೆದ ಕೆಲ ಹೊತ್ತಿನಲ್ಲಿಯೇ ರಸತಿ, ಪತಿ ಕೃಷ್ಣಮೂರ್ತಿ ಮತ್ತು ಇಬ್ಬರು ಪುತ್ರಿಯರಾದ ಕೃತಿಂಗ ಮತ್ತು ಮೋನಿಕಾ ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ಮರು ದಿನ ಬೆಳಗ್ಗೆ ಎಲ್ಲರೂ ಎಚ್ಚರಗೊಂಡ ರಸತಿಗೆ ಮಾಂಗಲ್ಯ ಸರ, ಕೃತಿಗರವರ ಮಾಂಗಲ್ಯ ಸರ, ಮತ್ತೊಂದು ಸರ ಹಾಗೂ ಮೋನಿಕಾರವರ ಸರ ಕಾಣೆಯಾಗಿರುವ ವಿಚಾರವನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಗಾಬರಿಗೊಂಡ ಕುಟುಂಬಸ್ಥರು ಈ ಸಂಬಂಧಪಟ್ಟಂತೆ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.
ಇದೀಗ ಪೊಲೀಸರು ಯುವತಿಯನ್ನು ಪತ್ತೆ ಮಾಡಿ ಬಂಧಿಸಿದ್ದು, ವಿಚಾರಣೆ ವೇಳೆ ಯುವತಿ ನಿದ್ರೆ ಮಾತ್ರೆಯನ್ನು ನೀಡಿ ಆಭರಣವನ್ನು ದೋಚಿ ಪರಾರಿಯಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಪೊಲೀಸರು ಯುವತಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.