ನವದೆಹಲಿ: ಕೊರೊನಾ ಲಸಿಕೆಗಾಗಿ ದೇಶದ ಜನ ಇನ್ನೂ ಎಷ್ಟು ದಿನ ಕಾಯಬೇಕು ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಇಒ ಪೂನಾವಾಲ ಅವರು ಮುಂದಿನ ವರ್ಷ ಪ್ರತಿಯೊಬ್ಬ ಭಾರತೀಯನಿಗೂ ಕೊರೊನಾ ಲಸಿಕೆ ನೀಡಬೇಕಾದಲ್ಲಿ ಸರ್ಕಾರ 80 ಸಾವಿರ ಕೋಟಿ ರೂ. ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೇ ಉಲ್ಲೇಖಿಸಿ ರಾಹುಲ್ ಗಾಂದಿ ಟ್ವೀಟ್ ಮಾಡಿದ್ದು, ನಾನು ಈ ಪ್ರಶ್ನೆಯನ್ನು ಕೇಳುತ್ತೇನೆ, ಏಕೆಂದರೆ ಭಾರತ ಹಾಗೂ ವಿದೇಶಗಳಲ್ಲಿನ ಲಸಿಕೆ ತಯಾರಕರ ಸಂಗ್ರಹಣೆ ಹಾಗೂ ವಿತರಣೆ ದೃಷ್ಟಿಯಿಂದ ದೇಶದ ಜನತೆಗೆ ಲಸಿಕೆ ಪೂರೈಕೆಗಾಗಿ ಯೋಜನೆ ಹಾಗೂ ಮಾರ್ಗಸೂಚಿ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶ್ನೆ ಸರಿಯಾಗಿದೆ ಆದರೆ ಇದಕ್ಕೆ ಉತ್ತರ ಪಡೆಯಲು ದೇಶದ ಜನ ಇನ್ನೂ ಎಷ್ಟು ಕಾಲ ಕಾಯಬೇಕು. ಕೋವಿಡ್ ಲಸಿಕೆ ತಲುಪಿಸುವ ಕಾರ್ಯತಂತ್ರವೂ ಮನ್ ಕೀ ಬಾತ್ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ್ದಾರೆ.
ಶನಿವಾರವಷ್ಟೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ವಿಶ್ವದಲ್ಲೇ ಹೆಚ್ಚು ಲಸಿಕೆ ಉತ್ಪಾದಿಸುವ ದೇಶ ಭಾರತವಾಗಿದೆ. ಈ ಕುರಿತು ವಿಶ್ವಕ್ಕೆ ನಾನು ಭರವಸೆ ನೀಡುತ್ತೇನೆ. ಲಸಿಕೆ ಉತ್ಪಾದನೆ ಮತ್ತು ಜನರಿಗೆ ತಲುಪಿಸುವ ಸಾಮಥ್ರ್ಯವನ್ನು ಭಾರತ ಹೊಂದಿದೆ. ಇದನ್ನು ಸಂಕಷ್ಟ ಕಾಲದಲ್ಲಿ ಮಾನವ ಕುಲಕ್ಕೆ ಒಳಿತಾಗುವುದಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಇಂದು ರಾಹುಲ್ ಗಾಂಧಿ ಅವರು ಲಸಿಕೆಗೆ ಇನ್ನೂ ಎಷ್ಟು ಕಾಯಬೇಕು ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೊರೊನಾ ಲಸಿಕೆ ಕುರಿತು ಜನ ಎದುರು ನೋಡುತ್ತಿದ್ದಾರೆ. ಕೇಂದ್ರ ಸರ್ಕಾರ ಸಹ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿದೆ. ಹಲವು ಔಷಧ ಸಂಸ್ಥೆಗಳು ಈಗಾಗಲೇ ಅಂತಿಮ ಹಂತದ ಪ್ರಯೋಗವನ್ನು ಆರಂಭಿಸಿದ್ದು, ಲಸಿಕೆ ಸರಬರಾಜಿಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 2021ರ ಆರಂಭದಲ್ಲಿ ವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಸಹ ಇತ್ತೀಚೆಗೆ ತಿಳಿಸಿದ್ದಾರೆ.
ದೇಶದಲ್ಲಿ ಒಂದೇ ದಿನ 88,600 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರ ಸಂಖ್ಯೆ 9,56,402ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಕ್ಷಸಿ ಕೊರೊನಾ 1,124 ಸೋಂಕಿತರನ್ನು ಬಲಿ ಪಡೆದುಕೊಂಡಿದ್ದು, ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 94,503ಕ್ಕೆ ಏರಿಕೆ ಆಗಿದೆ. ದೇಶದಲ್ಲಿ 59,92,533 ಕೊರೊನಾ ಪ್ರಕರಣಗಳು ವರದಿಯಾಗಿವೆ. ಸೆಪ್ಟೆಂಬರ್ 2ರಿಂದ ಪ್ರತಿನಿತ್ಯ ದೇಶದಲ್ಲಿ ಕೊರೊನಾದಿಂದಾಗಿ ಒಂದು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಪ್ರಮಾಣ ಶೇ.6.3ರಿಂದ ಶೇ.8.9ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಘಾತಕಾರಿ ಅಂಶವನ್ನು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ಗುಣಮುಖ ಪ್ರಮಾಣ ಶೇ.82.1ರಷ್ಟಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದಲೇ ಅತ್ಯಧಿಕ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಐದು ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ 49,176 ಮಂದಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಅಂದಾಜು ಒಟ್ಟು ಪ್ರಕರಣಗಳಲ್ಲಿ ಶೇ.55ರಷ್ಟು ಪಾಲು ಈ ಐದು ರಾಜ್ಯಗಳದ್ದಾಗಿದೆ.