ಕೊರೊನಾ ರೋಗಿಯನ್ನು ತಬ್ಬಿಕೊಂಡು ಸಂತೈಸಿದ ಡಾಕ್ಟರ್- ಮನಕಲಕುವ ಫೋಟೋ ವೈರಲ್

Public TV
1 Min Read
DOCTOR

ವಾಷಿಂಗ್ಟನ್: ಕೊರೊನಾ ವೈರಸ್ ಎಂಬ ಮಹಾಮಾರಿ ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ದಿನದಿಂದ ದಿನಕ್ಕೆ ವೈರಸ್ ಭಯ, ಆತಂಕ ಜನರಲ್ಲಿ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿದ ಅನೇಕ ಫೋಟೋ ಹಾಗೂ ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದೀಗ ಅಂಥದ್ದೇ ಒಂದು ಘಟನೆ ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದಿದ್ದು, ಮನಕಲಕುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಈ ಫೋಟೋ ನೋಡಿರುವ ನೆಟ್ಟಿಗರು ಕಣ್ಣಾಲಿಗಳು ತುಂಬಿ ಬಂದಿವೆ.

CORONA VIRUS 11

ಟೆಕ್ಸಾಸ್‍ನ ಹೂಸ್ಟನ್‍ನಲ್ಲಿ ಈ ಹೃದಯ ವಿದ್ರಾವಕ ಕ್ಷಣ ಸೆರೆಯಾಗಿದ್ದು, ಇದು ವಿಶ್ವದಾದ್ಯಂತದ ಹಿರಿಯ ಕೋವಿಡ್-19 ರೋಗಿಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದೆ. ಐಸಿಯು ವೈದ್ಯರು ಹಾಗೂ ಕೋವಿಡ್ -19 ರೋಗಿಯ ನಡುವಿನ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಕೊರೊನಾ ವಾರ್ಡಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಜೋಸೆಫ್ ವರಣ್, ತಾನು ಏಕಾಂಗಿ ಎಂದು ಕಣ್ಣೀರಾಗುತ್ತಿದ್ದ ಸೋಂಕಿತನಿಗೆ ಸಾಂತ್ವನ ಹೇಳುತ್ತಿರುವ ದೃಶ್ಯ ಇದಾಗಿದೆ.

CORONA VIRUS 7

ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ತನ್ನ ಪತ್ನಿಯನ್ನು ನೆನಪು ಮಾಡಿಕೊಂಡು ದುಃಖಿತನಾಗಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆಯೇ ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಬಂದು, ವೃದ್ಧನನ್ನು ಆಲಿಂಗಿಸಿಕೊಂಡು ಸಮಾಧಾನ ಮಾಡಿದ್ದಾರೆ. ಇದನ್ನು ಅಲ್ಲೇ ಇದ್ದವರು ಸೆರೆಹಿಡಿದಿದ್ದು, ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ವೈದ್ಯರ ಈ ಕಾಳಜಿಗೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಡಾ. ವರನ್, ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಅಳುತ್ತಿರುವುದನ್ನು ನೋಡಿದೆ. ಹೀಗಾಗಿ ಆತನ ಬಳಿ ಹೋಗಿ ನೀವು ಯಾಕೆ ಅಳುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆಗ ವೃದ್ಧ, ಪತ್ನಿ ಜೊತೆ ಇರಬೇಕು ಎಂದು ಬಯಸುವುದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನಾನು ಆತನನ್ನು ತಬ್ಬಿಕೊಂಡು ಸಂತೈಸಿದ್ದೇನೆ. ಅಲ್ಲದೆ ವೃದ್ಧನ ದುಃಖದಲ್ಲಿ ನಾನೂ ಪಾಲುದಾರನಾದೆ. ಕೆಲ ಹೊತ್ತು ಸಾಂತ್ವನ ಹೇಳಿದ ಬಳಿಕ ವೃದ್ಧ ಅಳುವುದನ್ನು ನಿಲ್ಲಿಸಿದರು. ಸದ್ಯ ಅವರ ಆರೋಗ್ಯ ಸುಧಾರಿಸಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *