– ಕೆಪಿಸಿಸಿ ಕಚೇರಿಗೆ ಸೈಕಲ್‌ನಲ್ಲಿ ಬಂದ ನಾಯಕರು
– ಸಾಮಾಜಿಕ ಅಂತರ ನಿಯಮ ಪಾಲನೆ ಉಲ್ಲಂಘನೆ
– ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಮಧ್ಯೆ ಕಾಂಗ್ರೆಸ್ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬೀದಿಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.
ಅಧ್ಯಕ್ಷ ಡಿಕೆ ಶಿವಕುಮಾರ್ , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನೂರಾರು ಕಾರ್ಯಕರ್ತರು ಸೈಕಲ್ ತುಳಿದ ಪರಿಣಾಮ ಕೆಪಿಸಿಸಿ ಕಚೇರಿ ಇರುವ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸಾಮಾಜಿಕ ಅಂತರದ ನಿಯಮವೇ ಉಲ್ಲಂಘನೆ ಆಗಿತ್ತು.
Advertisement
Advertisement
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೈಕನ್ನು ಚಟ್ಟಕ್ಕೆ ಕಟ್ಟಿ ಎತ್ತಿಕೊಂಡು ಹೋಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ನೂರಾರು ಜನ ಭಾಗವಹಿಸಿದ್ದರಿಂದ ಟ್ರಾಫಿಕ್ ಜಾಮ್‌ನಲ್ಲಿ ಅಂಬುಲೆನ್ಸ್ ಸಿಲುಕಿತ್ತು.ಎಲೆಕ್ಟ್ರಿಕ್ ವಿತ್ ಪೆಡಲ್ ಸೈಕಲ್ ನಲ್ಲಿ ಡಿಕೆಶಿಗೆ ನೂರಾರು ಕಾರ್ಯಕರ್ತರು ಸಾಥ್ ನೀಡಿದರು.
Advertisement
Advertisement
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 130 ಡಾಲರ್ ಇತ್ತು. ಆಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಗೆ ಕಾಂಗ್ರೆಸ್ ಸರ್ಕಾರ 2.41 ಲಕ್ಷ ಕೋಟಿ ರೂ ಸಬ್ಸಿಡಿ ನೀಡುತ್ತಿತ್ತು. ಈಗ ಕಚ್ಚಾ ತೈಲದ ಬ್ಯಾರೆಲ್ ಗೆ ಬೆಲೆ 40 ಡಾಲರ್ ಆಸುಪಾಸು ಇದೆ. ಈಗ ತೈಲ ಬೆಲೆ 25 ರೂ. ಲೀಟರ್ ಗೆ ಮಾರಬೇಕು. ಕೇಂದ್ರ ಸರ್ಕಾರ ಒಂದು ರೂ. ಸಬ್ಸಿಡಿ ನೀಡುತ್ತಿಲ್ಲ. ಅಬಕಾರಿ ಸುಂಕ ಏರಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಟೀಕಿಸಿದರು.
ಆರು ವರ್ಷದಲ್ಲಿ ಅಬಕಾರಿ ಸುಂಕದಿಂದ ಕೇಂದ್ರ ಸರ್ಕಾರಕ್ಕೆ 18 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಕೊರೋನಾ ಸಂದರ್ಭದಲ್ಲಿ ದಿನಾ ಪೆಟ್ರೋಲ್, ಡೀಸೆಲ್ ದರ ಹೆಚ್ಚು ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಇವತ್ತು ಸೈಕಲ್ ಜಾಥಾ ಮಾಡ್ತಿದ್ದೇವೆ. ಕೇಂದ್ರ ಸರ್ಕಾರದ ಕಚೇರಿಗಳ ಎದುರು ಎರಡು ಗಂಟೆ ಇವತ್ತು ಪ್ರತಿಭಟನೆ ಮಾಡುತ್ತೇವೆ. ಕೊರೊನಾ ನಿರ್ವಹಣೆಯಲ್ಲೂ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದ್ದು ಈ ವೈಫಲ್ಯ ವಿರುದ್ಧ ಪ್ರತ್ಯೇಕವಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.