– ಮಹಾರಾಷ್ಟ್ರದಲ್ಲಿ ವೀಕೆಂಡ್ ಲಾಕ್‍ಡೌನ್
– ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಸ್ತಬ್ಧ
ಮುಂಬೈ: ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಹೊಸ ದಾಖಲೆ ಬರೆದಿದೆ. ನಾಗ್ಪುರದಲ್ಲಿ ಒಂದೇ ದಿನ 4,110 ಪ್ರಕರಣಗಳು ವರದಿಯಾಗಿದ್ದು, 62 ಜನರು ಸಾವನ್ನಪ್ಪಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ವೀಕೆಂಡ್ ಲಾಕ್‍ಡೌನ್ ಘೋಷಣೆ ಮಾಡಿದೆ. ಏಪ್ರಿಲ್ 9ರಿಂದ ಲಾಕ್‍ಡೌನ್ ಜಾರಿಗೆ ಬರಲಿದೆ. ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ವೀಕೆಂಡ್ ಲಾಕ್‍ಡೌನ್ ಇರಲಿದೆ. ಈ ಸಮಯದಲ್ಲಿ ಬಸ್, ಟ್ಯಾಕ್ಸಿ, ರೈಲು ಸಂಚಾರ ಸೇರಿದಂತೆ ಅವಶ್ಯಕ ಸೇವೆಗಳು ಇರಲಿವೆ. ಆದ್ರೆ ಅನಗತ್ಯವಾಗಿ ಮನೆಯಿಂದ ಹೊರ ಬರೋರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಆಟೋಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಟ್ಯಾಕ್ಸಿ ಮತ್ತು ಇನ್ನಿತರ ಸಾರಿಗೆ ವಾಹನಗಳು ಶೇ.50ಕ್ಕಿಂತ ಪ್ರಯಾಣಿಕರು ಕರೆದುಕೊಂಡು ಹೋಗುವಂತಿಲ್ಲ. ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಕೇವಲ ಅರ್ಚಕರು ಮತ್ತು ಸಿಬ್ಬಂದಿ ತೆರಳಬಹುದಾಗಿದೆ.
ಇನ್ನು ಹೋಟೆಲ್ ಗಳಲ್ಲಿ ಕೇವಲ ಪಾರ್ಸೆಲ್ ನೀಡಬಹುದು. ಯಾವುದೇ ಹೋಟೆಲ್ ಒಳಗೆ ಸೇವೆ ನೀಡುವಂತಿಲ್ಲ. ಖಾಸಗಿ ಕಂಪನಿಗಳು ವರ್ಕ್ ಫ್ರಂ ಹೋಂಗೆ ಮೊದಲ ಆದ್ಯತೆ ನೀಡಬೇಕು. ಪ್ರವಾಸಿ ತಾಣಗಳಲ್ಲಿ ಕೊರೊನಾ ಕಠಿಣ ನಿಯಮ ಜಾರಿಗೆ ತರಲಾಗಿದೆ.