ಚಾಮರಾಜನಗರ: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಇದೀಗ ಚಾಮರಾಜನಗರದ ಜನತೆ ದೇವರ ಮೊರೆ ಹೋಗಿದ್ದಾರೆ.
ಹೌದು. ಕೊರೊನಾ ಹೆಮ್ಮಾರಿ ಪ್ರವೇಶ ಮಾಡಬಾರದೆಂದು ಹಲವೆಡೆ ಪೂಜೆ ಮಾಡಲಾಗುತ್ತಿದೆ. ಮನೆ ಮನೆ ಹಾಗೂ ಬೀದಿಗಳ ಸ್ವಚ್ಛತೆ ಮಾಡುತ್ತಿದ್ದು, ಮನೆಗಳ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿ ಹಾಕುತ್ತಾರೆ. ಈ ರಂಗೋಲಿ ಮಧ್ಯೆ ಹಳ್ಳ ತೆಗೆದು ಸುತ್ತಲೂ ಬಲಿ ಅನ್ನ ಹಾಕಿ, ಹಳ್ಳಕ್ಕೆ ಕೆಂಡ ಸುರಿದು ಧೂಪ ಹಾಕಿ ದೇವರಿಗೆ ಪೂಜೆ ನಡೆಸಿದ್ದಾರೆ.
ಮಾರಿಯರು, ಮಸಣಿಯರು ಪೀಡೆ ಪಿಶಾಚಿ ಬೀದಿಗೆ ನುಗ್ಗಬಾರದು, ಮನೆಯೊಳಗೆ ಬರಬಾರದು. ಸೋಂಕು ಒಬ್ಬರಿಗೊಬ್ಬರಿಗೆ ತಗುಲಬಾರದು ಎಂದು ನಿವಾಸಿಗಳು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. 12 ದಿನಗಳ ಕಾಲ ಪ್ರತಿ ರಾತ್ರಿ ಹೀಗೆ ಪೂಜೆ ಮುಂದುವರಿಸಲು ನಿರ್ಧಾರ ಮಾಡಿದ್ದಾರೆ.
ಚಾಮರಾಜನಗರ ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳ ಹಲವೆಡೆ ಇದೇ ರೀತಿಯ ಪೂಜೆಗಳನ್ನು ನಡೆಸಲಾಗುತ್ತಿದೆ. ಕೆಲವೆಡೆ ಕಬ್ಬಿಣದ ಸರಳು ನೆಟ್ಟು, ಬೇವಿನ ಸೊಪ್ಪು ಹಾಕಿ ಧೂಪ ಹಾಕಿ ಪೂಜೆ ಮಾಡಿದರೆ, ಇನ್ನೂ ಕೆಲವೆಡೆ ಪೂಜೆಗೆ ತೋರಿಸುವ ಶ್ರದ್ಧೆ, ಅಸಕ್ತಿ ಯನ್ನು ಕೊರೊನಾ ನಿಯಮಗಳ ಪಾಲನೆಗೆ ಜನ ತೋರುತ್ತಿಲ್ಲ.
ಒಟ್ಟಿನಲ್ಲಿ ಜನ ಮೂಢನಂಬಿಕೆಗೆ ಒತ್ತು ನೀಡುವಷ್ಟು ಕೊರೊನಾ ಜಾಗೃತಿಗೆ ನೀಡುತ್ತಿಲ್ಲ.