ಕೊರೊನಾ ಮಧ್ಯೆ ಶಾಲೆ ಆರಂಭ, ಸರ್ಕಾರಕ್ಕೆ 10 ‘ಪಬ್ಲಿಕ್’ ಪ್ರಶ್ನೆ – ಎಷ್ಟು ಮಕ್ಕಳಿಗೆ ಸೋಂಕು ಬಂದಿದೆ?

Public TV
3 Min Read
Govt School 4

ಬೆಂಗಳೂರು: ಕೊರೋನಾ ತಾಂಡವವಾಡ್ತಿದೆ. ಖುದ್ದು ಕೇಂದ್ರ ಸರ್ಕಾರವೇ, ಮನೆಯಿಂದ ಹೊರಬರಬೇಡಿ ಎಂದು ಮಕ್ಕಳಿಗೆ, ವೃದ್ಧರಿಗೆ ಲಾಕ್‍ಡೌನ್ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳದ ರಾಜ್ಯ ಸರ್ಕಾರ, ಜುಲೈ 1ರಿಂದ ಶಾಲೆಗಳನ್ನು ತೆರೆಯಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.

4ರಿಂದ ಏಳನೇ ತರಗತಿಯ ಮಕ್ಕಳಿಗೆ ಜುಲೈ 1ರಿಂದ, 1ನೇ ತರಗತಿಯಿಂದ 3ನೇ ತರಗತಿವರೆಗಿನ ಮಕ್ಕಳಿಗೆ, 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜುಲೈ 15ರಿಂದ ಶಾಲೆ ನಡೆಸಲು ಪ್ಲಾನ್ ಮಾಡ್ತಿದೆ. ಇನ್ನು ಮೂರು ದಿನಗಳಲ್ಲಿ ಶಾಲೆಗೆ ಬರುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

School College 3

ಜೂನ್ 10ರಿಂದ ಪೋಷಕರ ಅಭಿಪ್ರಾಯ ಸಂಗ್ರಹಿಸಲು ಸಹ ಮುಂದಾಗಿದೆ. ಕಳೆದ ವಾರವಷ್ಟೇ ದಕ್ಷಿಣ ಕೊರಿಯಾದಲ್ಲಿ ಶಾಲೆಗಳ ಪುನಾರಂಭ ಆಗಿತ್ತು. ಈ ಬೆನ್ನಲ್ಲೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದವು. ಹೀಗಾಗಿ ಕಳೆದ 2 ದಿನಗಳಲ್ಲಿ 500ಕ್ಕೂ ಹೆಚ್ಚು ಶಾಲೆಗಳನ್ನು ಅಲ್ಲಿ ಮತ್ತೆ ಮುಚ್ಚಲಾಗಿದೆ. ಕಣ್ಣಮುಂದೆಯೇ ಇಂಥಾ ಉದಾಹರಣೆ ಇದ್ರೂ ಕೂಡ ಸರ್ಕಾರ, ಶಾಲೆ ತೆರೆಯಲು ಬಹಳ ಉತ್ಸುಕವಾಗಿವೆ.

ಸರ್ಕಾರದ ನಿರ್ಧಾರಕ್ಕೆ ಶಿಕ್ಷಣ ತಜ್ಞರಿಂದ, ಪೋಷಕರಿಂದ, ಖಾಸಗಿ ಶಾಲೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕೆಲ ಪೋಷಕರಂತೂ ಈ ವರ್ಷ ನಾವು ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎನ್ನುತ್ತಿದ್ದಾರೆ. ಹಿಂದೆ ಮುಂದೆ ನೋಡ್ದೇ, ಮಕ್ಕಳ ಹಿತ ಪರಿಗಣಿಸದೇ ಆತುರದ ಕ್ರಮಕ್ಕೆ ಮುಂದಾಗಿರುವ ಸರ್ಕಾರದ ನಡೆ ವಿರುದ್ಧ ನಿಮ್ಮ ಪಬ್ಲಿಕ್ ಟಿವಿ ಕೂಡ ಸ್ಕೂಲ್ ಬೇಕಾ ಹೆಸರಲ್ಲಿ ಅಭಿಯಾನ ಆರಂಭಿಸಿದೆ. ದೇಶದಲ್ಲಿ ಕೂಡ ಸಾಮಾಜಿಕ ಜಾಲತಾಣದಲ್ಲಿ ನೋ ವ್ಯಾಕ್ಸಿನ್, ನೋ ಸ್ಕೂಲ್ ಹೆಸರಲ್ಲಿ ದೊಡ್ಡಮಟ್ಟದ ಅಭಿಯಾನ ನಡೆಯುತ್ತಿದೆ. ಇದುವರೆಗೆ 4.70 ಲಕ್ಷಕ್ಕೂ ಹೆಚ್ಚು ಪೋಷಕರು ಈ ಅಭಿಯಾನ ಬೆಂಬಲಿಸಿ ಸಹಿ ಹಾಕಿದ್ದಾರೆ.

Govt School 1

ಸರ್ಕಾರಕ್ಕೆ ‘ಪಬ್ಲಿಕ್’ ದಶ ಪ್ರಶ್ನೆ:
1. ಶಾಲೆಗಳಲ್ಲಿ 10 ವರ್ಷದೊಳಗಿನ ಮಕ್ಕಳ ರಕ್ಷಣೆ ಮಾಡೋದು ಸಾಧ್ಯನಾ?
2. ಸಾಮಾಜಿಕ ಅಂತರ ಅಂತಾರೆ. ಇದು ಶಾಲೆಗಳಲ್ಲಿ ಅಷ್ಟು ಸುಲಭನಾ?
3. ಆಟ, ಊಟದ ಸಮಯದಲ್ಲಿ ಮಕ್ಕಳನ್ನು ನಿಯಂತ್ರಣ ಮಾಡೋದು ಹೇಗೆ?
4. ಮಕ್ಕಳು ತನ್ನ ಸ್ನೇಹಿತರ ಜೊತೆ ಸೇರಲ್ಲ ಅಂತಾ ಏನು ಗ್ಯಾರಂಟಿ?

Private School Students
5. 6 ರಿಂದ 8 ಗಂಟೆ ಗಂಟೆಗಳ ಕಾಲ ಮಕ್ಕಳು ಮಾಸ್ಕ್ ಧರಿಸಿ ಇರಲು ಸಾಧ್ಯನಾ?
6. ಪಾಳಿಯಲ್ಲಿ ತರಗತಿ ಅಂತಾರೆ. ಬೆಳಗ್ಗೆ ಬೇಗ ಮಕ್ಕಳು, ಶಿಕ್ಷಕರು ಬರೋಕೆ ಸಾಧ್ಯನಾ?
7. ಬೆಳಗ್ಗೆ ಬಂದು ಸಂಜೆವರೆಗೂ ಪಾಠ ಮಾಡೋಕೆ ಒಬ್ಬ ಶಿಕ್ಷಕರಿಂದ ಸಾಧ್ಯನಾ?
8. ಪ್ರತಿ ನಿತ್ಯ ಶಾಲಾ ಕೊಠಡಿಗಳು ಸ್ಯಾನಿಟೈಸ್ ಆಗಬೇಕು.. ಇದು ಸಾಧ್ಯನಾ?
9. ಶಾಲಾ ವಾಹನದಲ್ಲಿ ಮಕ್ಕಳ ಸಾಮಾಜಿಕ ಅಂತರ ಮಾನಿಟರ್ ಮಾಡೋರು ಯಾರು?
10. ಮಳೆಗಾಲ ಬೇರೆ ಶುರುವಾಗ್ತಿದೆ. ಈ ವೇಳೆ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ನಿತ್ಯ ಆರೋಗ್ಯ ತಪಾಸಣೆ ಸಾಧ್ಯ ಆಗುತ್ತಾ..?

school

ಆನ್‍ಲೈನ್ ತರಗತಿಗೆ ವಿರೋಧ:
ಆನ್‍ಲೈನ್ ತರಗತಿಗಳಿಗೆ ಪರ ವಿರೋಧ ವ್ಯಕ್ತವಾಗ್ತಿದೆ. ಪಕ್ಕದ ಕೇರಳದಲ್ಲಿ ಸರ್ಕಾರವೇ ಆನ್‍ಲೈನ್ ತರಗತಿ ಆರಂಭಿಸಿದ್ದು, ಇಂಟರ್ನೆಟ್ ಇಲ್ಲದೇ ಈ ತರಗತಿಗೆ ಹಾಜರಾಗದ್ದಕ್ಕೆ ಮಲಪ್ಪುರಂನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. ಕೇರಳ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನೆಗಳು ಜೋರು ನಡೆಯುತ್ತಿದೆ.

RCR Pencil School 1

 

ಮಕ್ಕಳಿಗೂ ಕೊರೊನಾ
ಕೊರೊನಾ ನಡುವೆ ಶಾಲೆಗಳನ್ನು ತೆರೆಯೋದು ಬೇಡ ಅಂತಾ ಕೂಗು ಎದ್ದಿರೋದಕ್ಕೂ ಕಾರಣವಿದೆ. ಮನೆಯಲ್ಲಿರುವ ಮಕ್ಕಳನ್ನು ಕೊರೊನಾ ವೈರಸ್ ಬಿಟ್ಟಿಲ್ಲ. ಸ್ಕೂಲ್, ಕಾಲೇಜ್ ಇರದ ಅವಧಿಯಲ್ಲಿ ಹೊರಗೇ ಸುತ್ತಾಡದೇ ಮನೆಯಲ್ಲೇ ಇದ್ದ ನೂರಾರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಕಾರಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.

0-5 ವರ್ಷದ 142 ಮಕ್ಕಳಿಗೆ, 5-10 ವರ್ಷ 184 ಮಕ್ಕಳಿಗೆ ಕೊರೊನಾ ಬಂದಿದ್ದರೆ 10-20 ವರ್ಷದ 536 ಮಕ್ಕಳಿಗೆ ಸೋಂಕು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *