– ಸಿದ್ದರಾಮಯ್ಯ ಭೇಟಿಯಾಗಿದ್ದ ಉಮೇಶ್ ಕತ್ತಿ?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎಂಬ ಹೆಮ್ಮಾರಿ ತಾಂಡವವಾಡುತ್ತಿದ್ದು, ಈ ಮಧ್ಯೆ ರಾಜ್ಯ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ಕೆಲ ಶಾಸಕರು ಬಂಡಾಯವೆದ್ದಿದ್ದು, ಪಕ್ಷದ ಈ ಒಳಜಗಳಗಳನ್ನು ಕಾಂಗ್ರೆಸ್ ಎನ್ ಕ್ಯಾಶ್ ಮಾಡಿಕೊಳ್ಳುತ್ತಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಬಿಜೆಪಿಯಲ್ಲಿ ಶಾಸಕರು ಬಂಡಾಯವೇಳುತ್ತಿದ್ದಂತೆಯೇ ವಿರೋಧ ಪಕ್ಷದಲ್ಲಿ ಕೂಡ ರಾಜಕೀಯ ಮೇಲಾಟ ಶುರುವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಕಳೆದ 15 ದಿನಗಳಿಂದ ಆಪರೇಷನ್ ಯಡಿಯೂರಪ್ಪ ಪ್ಲಾನ್ ನಡೆಯುತ್ತಿದೆ. ಈ ಪ್ಲಾನ್ ತಿಳಿದು ವಿರೋಧ ಪಕ್ಷಗಳು ಕಾದುನೋಡುವ ತಂತ್ರ ಅನುಸರಿಸುತ್ತಿವೆಯಂತೆ. ನಾಲ್ಕೈದು ದಿನದ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿಗೆ ಹೆಚ್.ಡಿ ರೇವಣ್ಣ ತೆರಳಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಕೆಲ ಬಂಡಾಯ ಶಾಸಕರ ಜೊತೆಯೂ ಸಂಪರ್ಕ ಇದೆ ಅನ್ನೋ ಮಾಹಿತಿ ಇದೆ. ಆದರೆ ಸಿದ್ದರಾಮಯ್ಯ ಈಗ ಸಕಾಲ ಅಲ್ಲ, ಕಾಯೋಣ ಎಂದಿದ್ದಾರೆ ಎನ್ನಲಾಗಿದೆ.
ರೇವಣ್ಣ ಕೂಡ ಸದ್ಯ ನಡೆಯುತ್ತಿರುವ ಬೆಳವಣಿಗೆಯನ್ನ ನಿರ್ಲಕ್ಷ್ಯ ಮಾಡೋದು ಬೇಡ ಎಂದು ಕಿವಿಮಾತು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಯಿಂದ ಯಾರಿಗೆ ಲಾಭ?, ಯಾರಿಗೆ ನಷ್ಟವಾಗಲಿದೆ ಎಂಬುದು ಕುತೂಹಲವಾಗಿದೆ. ಇತ್ತ ರೇವಣ್ಣ ಭೇಟಿ ಬಳಿಕ ಸಿದ್ದರಾಮಯ್ಯ ಉಮೇಶ್ ಕತ್ತಿಯವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿಯೂ ಲಭಿಸಿದೆ. ನಾಲ್ಕು ದಿನಗಳ ಹಿಂದೆಯೇ ಸಿದ್ದರಾಮಯ್ಯ ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.