– ವಿನ್ಸಿ ಟಿ-10 ಲೀಗ್ ಇಂದಿನಿಂದ ಆರಂಭ
– ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ
ಪೋರ್ಟ್ ಆಫ್ ಸ್ಪೇನ್: ಕೊರೊನಾ ಭೀತಿಯ ನಡುವೆ ಕೆರಿಬಿಯನ್ನರ ನಾಡಲ್ಲಿ ಕ್ರಿಕೆಟ್ ಚಟುವಟಿಕೆ ಗರಿಗೆದರಿದೆ. ವಿನ್ಸಿ ಪ್ರೀಮಿಯರ್ ಟಿ-10 ಲೀಗ್ (ವಿಪಿಎಲ್) ಇಂದು ಪೂರ್ವ ಕೆರಿಬಿಯನ್ ದೇಶವಾದ ಸೇಂಟ್ ವಿನ್ಸೆಂಟ್ ಮತ್ತು ದಿ ಗ್ರೆನಡೈನ್ಸ್‍ನಲ್ಲಿ ಪ್ರಾರಂಭವಾಗಲಿವೆ.
ವಿನ್ಸಿ ಪ್ರೀಮಿಯರ್ ಟಿ-10 ಲೀಗ್ ಟೂರ್ನಿ ಮೇ 31ರವರೆಗೆ ನಡೆಯಲಿದ್ದು, ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಎಲ್ಲಾ 6 ತಂಡಗಳು ಟೂರ್ನಿಯಲ್ಲಿ 10 ದಿನ ಕಾಲ 28 ಪಂದ್ಯಗಳನ್ನು ಆಡಲಿವೆ. ಪ್ರತಿದಿನ 3 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಫ್ಯಾನ್‍ಕೋಡ್ ಅಪ್ಲಿಕೇಶನ್‍ನಲ್ಲಿ ಭಾರತೀಯ ಕಾಲಮಾನ ಸಂಜೆ 6ರಿಂದ ರಾತ್ರಿ 10:30 ರವರೆಗೆ ಪಂದ್ಯದ ನೇರ ಪ್ರಸಾರವಾಗಲಿದೆ.
Advertisement
Advertisement
ಈ ಲೀಗ್‍ನ 6 ತಂಡಗಳಲ್ಲಿ ಒಟ್ಟು 72 ಆಟಗಾರರಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ಈ ಆಟಗಾರರನ್ನು ಮೇ 11ರಂದು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದರು. ಲೀಗ್‍ನಲ್ಲಿ ವೆಸ್ಟ್ ಇಂಡೀಸ್‍ನ ಸುನಿಲ್ ಅಂಬರೀಸ್, ಕೆಸ್ರಿಕ್ ವಿಲಿಯಮ್ಸ್ ಮತ್ತು ಒಬೆಡ್ ಮೆಕಾಯ್ ಸೇರಿದಂತೆ 6 ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ.
Advertisement
ಸದ್ಯ ಭಾರೀ ಚರ್ಚೆಯಲ್ಲಿರುವ ಲಾಲಾರಸ (ಉಗುಳನ್ನು) ಬಾಲ್‍ಗೆ ಹಚ್ಚುವುದನ್ನು ಟೂರ್ನಿಯಲ್ಲಿ ನಿಷೇಧಿಸಲಾಗಿದೆ. ಈ ಮೂಲಕ ಬಾಲ್ ಹೊಳೆಯಲು ಲಾಲಾರಸ ಅಥವಾ ಬೆವರು ಬಳಸದ ಮೊದಲ ಕ್ರಿಕೆಟ್ ಪಂದ್ಯಾವಳಿ ಇದಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್‍ನಲ್ಲಿ ಲಾಲಾರಸದ ಬಳಕೆಯನ್ನು ನಿಷೇಧಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬೆವರು ಬಳಕೆಯನ್ನು ನಿಷೇಧಿಸಲಿಲ್ಲ.
Advertisement
ಪಂದ್ಯದ ವೇಳೆ ಆಟಗಾರರಿಗೆ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರದ ಸಲಹೆಯಂತೆ ಟೂರ್ನಿ ನಡೆಸಲಾಗುವುದು. ಪಂದ್ಯದ ಸಮಯದಲ್ಲಿ ಸಣ್ಣ ವಿರಾಮವೂ ಇರುತ್ತದೆ. ಇದರಿಂದ ಆಟಗಾರರು ಕೈಯನ್ನು ಸ್ವಚ್ಛಗೊಳಿಸಬಹುದು. ಅಲ್ಲದೆ ಮ್ಯಾಚ್ ಫಿಕ್ಸಿಂಗ್ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಸಿಡಬ್ಲ್ಯುಐ) ತಿಳಿಸಿದೆ.
ಪ್ರೇಕ್ಷಕರ ಆಸನಕ್ಕಾಗಿ ವ್ಯವಸ್ಥೆ:
“ಸರ್ಕಾರವು ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಆದ್ದರಿಂದ ಖಾಲಿ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯುತ್ತಿಲ್ಲ. ಕೊರೊನಾ ವೈರಸ್ ಭೀತಿಯ ನಡುವೆ ಟೂರ್ನಿ ನಡೆಯುತ್ತಿವೆ. ಆದ್ದರಿಂದ ಹೆಚ್ಚಿನ ವೀಕ್ಷಕರನ್ನು ಪಡೆಯುವ ಭರವಸೆಯಿಲ್ಲ. ಅದೇನೇ ಇದ್ದರೂ ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ದೂರದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದ್ದೇವೆ. ಪಂದ್ಯದ ಸಮಯದಲ್ಲಿ ವೈದ್ಯಕೀಯ ತಂಡ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳು ಲಭ್ಯವಿರುತ್ತವೆ.” ಎಂದು ಸಿಡಬ್ಲ್ಯುಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾದಿಂದಾಗಿ ಕಳೆದ ಮಾರ್ಚ್ ನಲ್ಲಿ ವಿಶ್ವಾದ್ಯಂತ ಕೆಲ ಕ್ರಿಕೆಟ್ ಟೂರ್ನಿಗಳು ರದ್ದುಗೊಂಡರೆ, ಇನ್ನು ಕೆಲವು ಮುಂದೂಲ್ಪಟ್ಟಿದ್ದವು. ಕೊರೊನಾ ಆವರಿಸಲಾರಂಭಿಸಿದಾಗ ನಡೆದ ವಿಶ್ವ ಕ್ರಿಕೆಟಿಗರನ್ನೊಳಗೊಂಡ ಕಡೇಯ ಟೂರ್ನಿಯೆಂದರೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್). ಕರಾಚಿ ಕಿಂಗ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಧ್ಯೆ ಮಾರ್ಚ್ 15ರಂದು ಪಂದ್ಯ ನಡೆದಿತ್ತು. ಆದರೆ ಕೊರೊನಾ ತೀವ್ರಗೊಂಡಿದ್ದರಿಂದ ಪಿಎಸ್‍ಎಲ್ ರದ್ದಾಗಿತ್ತು.