ಧಾರವಾಡ: ಕೊರೊನಾ ಭಯದಿಂದ ವಿದ್ಯಾರ್ಥಿಗಳು ಧಾರವಾಡ ನಗರ ತೊರೆಯುತ್ತಿದ್ದಾರೆ.
ನಗರದ ಸಪ್ತಾಪುರ ರಸ್ತೆಯಲ್ಲಿರುವ ಗೌರಿ ಶಂಕರ ಹಾಸ್ಟೆಲ್ ನಲ್ಲಿ ಕಳೆದ ಮೂರು ದಿನಗಳ ಹಿಂದೆ 10, ಕರ್ನಾಟಕ ವಿಶ್ವವಿದ್ಯಾಲಯ ಅಧೀನದ ಕಾವೇರಿ ಹಾಸ್ಟೆಲ್ ನಲ್ಲಿ 7 ವಿದ್ಯಾರ್ಥಿನಿಯರಿಗೆ ಹಾಗೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ 13 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅದರ ಬೆನ್ನಲ್ಲೇಯೇ ಕರ್ನಾಟಕ ವಿವಿಯ ರಾಣಿ ಚನ್ನಮ್ಮ ವಸತಿ ನಿಲಯದಲ್ಲಿಯೂ ಕೆಲ ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಗಿದೆ. ಈ ಹಿನ್ನೆಲೆ ಭಯದಿಂದ ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮೂರಿನತ್ತ ಹೊರಟು ನಿಂತಿದ್ದಾರೆ.
ಇಂದು ಬಹುತೇಕ ವಿದ್ಯಾರ್ಥಿಗಳು ತಮ್ಮ ಊರಿಗೆ ಹೋಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಿದ ಬೆನ್ನಲ್ಲೇ ಪೋಷಕರು ಮಕ್ಕಳಿಗೆ ಕರೆ ಮಾಡಿ ಕರೆಯುತಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಪರಿಣಾಮ ಬಸ್ ಇಲ್ಲದ ಕಾರಣಕ್ಕೆ ಪರೀಕ್ಷೆಗಳನ್ನು ಹಂತ ಹಂತವಾಗಿ ಮುಂದೂಡಿದ್ದರು. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿದ್ದರು. ಸದ್ಯ ಅನಿರ್ದಿಷ್ಟಾವಧಿಯವರೆಗೆ ಪರೀಕ್ಷೆ ಮುಂದೂಡಿಕೆಯಾದ ಹಿನ್ನೆಲೆ ವಿದ್ಯಾರ್ಥಿಗಳು ಊರಿನತ್ತ ಹೊರಟಿದ್ದಾರೆ.