ಕಾರವಾರ: ಹೃದಯಾಘಾತವಾದ ವ್ಯಕ್ತಿಗೆ ಕೊರೊನಾ ಭಯದಿಂದ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ ಹಿನ್ನೆಲೆ ರೋಗಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.
ರಾಜಸ್ಥಾನ ಮೂಲದ ಮುರುಡೇಶ್ವರ ನಿವಾಸಿ ಹುಕ್ಮಾರಾಮ್ ಬೊರಾನ (65) ವೈದ್ಯರ ನಿರ್ಲಕ್ಷದಿಂದ ಮೃತಪಟ್ಟ ವ್ಯಕ್ತಿ. ಮೂಲತಃ ರಾಜಸ್ಥಾನದ ಹುಕ್ಮಾರಾಮ್ ಬೋರಾನ್ ಕಳೆದ 35 ವರ್ಷಗಳಿಂದ ಮುರುಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ಎದೆನೋವಿನಿಂದ ಅಸ್ವಸ್ಥಗೊಂಡ ಖಾಸಗಿ ಕ್ಲಿನಿಕ್‍ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುವಾಗ ಮೂರ್ಚೆ ಹೋಗಿದ್ದಾರೆ.
Advertisement
Advertisement
ನಂತರ ಕೂಡಲೇ ಸಂಬಂಧಿಕರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿನ ವೈದ್ಯ ಪ್ರಿಯಾ ಗೋನ್ಸಾಲಿಸ್ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಅಲ್ಲದೆ ಚಿಕಿತ್ಸೆ ಕೊಡಲು ನಿರಾಕರಿಸಿ ಇಲ್ಲಿಂದ ತೆಗೆದುಕೊಂಡು ಹೋಗಿ ಇಲ್ಲವಾದರೆ ಪೊಲೀಸ್ ಠಾಣೆಗೆ ದೂರು ನೀಡುವೆ ಎಂದು ಬೆದರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
Advertisement
Advertisement
ಅಲ್ಲಿಂದ ನೇರವಾಗಿ ಮುರುಡೇಶ್ವರದ ಆರ್.ಎನ್.ಎಸ್. ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ದೊರಕದೆ ಸುಮಾರು ಎರಡು ಗಂಟೆ ಅಲೆದಾಡಿದ ನಂತರ ಸ್ಥಳೀಯ ಕ್ಲಿನಿಕ್ ವೈದ್ಯರು ಪರೀಶೀಲನೆ ನಡೆಸಿ, ರೋಗಿ ಉಸಿರಾಡುತ್ತಿದ್ದು ಕೂಡಲೆ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ರೋಗಿ ಮೃತಪಟ್ಟಿದ್ದಾರೆ.
ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ತಮ್ಮ ತಂದೆಯನ್ನು ಕಳೆದುಕೊಳ್ಳುವಂತಾಯಿತು ಎಂದು ಮೃತ ವ್ಯಕ್ತಿಯ ಮಗ ರಿತೇಶ್ ದೂರಿದ್ದಾರೆ. ಇನ್ನು ವೈದ್ಯರ ನಿರ್ಲಕ್ಷ್ಯಕ್ಕೆ ಮುರಡೇಶ್ವರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.