ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ತಜ್ಞರ ಸಭೆ ಕರೆದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಒಂದು ತಿಂಗಳಿನಿಂದ ಕೋವಿಡ್ ನಮ್ಮ ಕೈ ಮೀರಿ ಹೋಗುತ್ತಿದೆ. ಪ್ರಕರಣಗಳ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಸದ್ಯದ ಪರಿಸ್ಥಿತಿ ಮುಂದುವರಿಬೇಕಾದ್ರೆ ಜನರು ಸಹಕರಿಸಬೇಕು. ಹಾಗಾಗಿ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.
ಇನ್ಮುಂದೆ ಮದುವೆ, ಸಮಾರಂಭದಲ್ಲಿ ಎಷ್ಟು ಜನರು ಭಾಗವಹಿಸಬೇಕು ಎಂಬುದರ ತೀರ್ಮಾನಿಸಲಾಗುತ್ತದೆ. ಇಂದು ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ್ದೇನೆ. ಸೋಮವಾರ ಸಂಜೆ 5 ಗಂಟೆಗೆ ತಜ್ಞರ ಸಭೆ ಕರೆಯಲಾಗಿದ್ದು, ಕೊರೊನ ನಿಯಂತ್ರಣದ ಕುರಿತು ಚರ್ಚಿಸಲಾಗುವುದು. ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಲ್ಲಿಯ ಜನರು ರಾಜ್ಯಕ್ಕೆ ಬರೋದನ್ನ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.