ಕೊರೊನಾ ಬಾರದಂತೆ ಸ್ವಾಮೀಜಿಯಿಂದ ಬೆತ್ತ ಪೂಜೆ – ಮಧ್ಯರಾತ್ರಿ ಗ್ರಾಮದಲ್ಲಿ ನಡೆಯುತ್ತೆ ದಿಗ್ಬಂಧನ ಪೂಜೆ

Public TV
2 Min Read
FotoJet 73

ಹುಬ್ಬಳ್ಳಿ: ಕೊರೊನಾ ಬಾರದಂತೆ ಇಲ್ಲೊಂದು ಗ್ರಾಮದಲ್ಲಿ ಸ್ವಾಮೀಜಿಯಿಂದ ದಿಗ್ಬಂದನ ಪೂಜೆ ನಡೆಯುತ್ತಿದೆ. ರಾತ್ರಿ 10 ರಿಂದ 11 ರವರೆಗೆ ಪೂಜೆ ನಡೆಯುತ್ತಿದ್ದು, ಬಳಿಕ ಸ್ವಾಮೀಜಿ ಬೆತ್ತ ಹಿಡಿದು ಗ್ರಾಮದ ಸುತ್ತಲೂ ಓಂ ನಮಃ ಶಿವಾಯ ನಾಮ ಸ್ಮರಣೆಯೊಂದಿಗೆ ಸುತ್ತಾಡಿ ದಿಗ್ಬಂಧನ ಮಾಡುತ್ತಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಲ್ಲಿ ಕಳೆದ ಮೂರು ದಿನಗಳಿಂದ ದಿಗ್ಬಂಧನ ಪೂಜೆ ನಡೆಯುತ್ತಿದೆ. ಇಬ್ರಾಹಿಂಪುರದಲ್ಲಿ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಎರಡು ಮಠಗಳಿವೆ. ಇವುಗಳಲ್ಲಿ ಶಿವಯೋಗಿ ಹಿರೇಮಠ ಸ್ವಾಮೀಜಿ ಪೂಜೆ ಸಲ್ಲಿಸುತ್ತಿದ್ದಾರೆ. ಮಠದ ಗರ್ಭಗುಡಿಯಲ್ಲಿ ರಾತ್ರಿ ವೇಳೆ ಬೆತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅದನ್ನು ಹಿಡಿದು ಶಿವಯೋಗಿ ಸ್ವಾಮೀಜಿ, `ಓಂ ನಮಃ ಶಿವಾಯ’ ಎಂದು ನಾಮ ಸ್ಮರಣೆ ಮಾಡುತ್ತಾ ಊರೆಲ್ಲ ಸುತ್ತು ಹಾಕುತ್ತಾರೆ.

FotoJet 2 49

ಹೀಗೆ ಸುತ್ತು ಹಾಕುವುದರಿಂದ ಊರಲ್ಲಿ ಕೊರೊನಾ ಬಾರದಂತೆ ದಿಗ್ಬಂಧನ ಹಾಕಿದಂತೆ. ಇದರಿಂದ ಕೊರೊನಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ನಮ್ಮೂರಿನತ್ತ ಹಾಯುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರು ಮತ್ತು ಶ್ರೀಗಳದ್ದಾಗಿದೆ. 5 ದಿನಗಳ ದಿಗ್ಬಂಧನ ಪೂಜೆಯಿದಾಗಿದ್ದು, ಈಗಾಗಲೇ ಮೂರು ದಿನಗಳ ಪೂಜೆ ಮುಗಿದಿದೆ. ಇನ್ನೆರಡು ದಿನ ಪೂಜೆ ಮಾಡುವುದು ಬಾಕಿಯಿದ್ದು, ಗುರುವಾರ ಮುಕ್ತಾಯವಾಗುತ್ತದೆ. ಕಳೆದ ವರ್ಷ ಕೊರೊನಾ ಮೊದಲ ಅಲೆಯ ವೇಳೆಯಲ್ಲೂ ಈ ರೀತಿ ಪೂಜೆ ಮಾಡಿ ದಿಗ್ಬಂಧನ ಹಾಕಲಾಗಿತ್ತು. ಆಗ ಹಾವಳಿ ಕಡಿಮೆಯಾಗಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊದಲು ಇತ್ತು: ದಶಕಗಳ ಹಿಂದೆ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಇಬ್ಬರು ಈ ಊರಲ್ಲಿ ತಪಸ್ಸು ಮಾಡಿ ನೆಲೆ ನಿಂತಿದ್ದರಂತೆ. ಆಗ ಊರೆಲ್ಲೆಲ್ಲ ಪ್ಲೇಗ್ ಹಾವಳಿ ಇತ್ತು ಎನ್ನಲಾಗುತ್ತಿದ್ದು, ಇಬ್ರಾಹಿಂಪುರದಲ್ಲಿ ಈ ಮಹಾಮಾರಿ ಕಾಲಿಡಬಾರದೆಂದು ಈ ರೀತಿ ದಿಗ್ಬಂಧನ ಪೂಜೆ ಪ್ರತಿವರ್ಷ ಮಾಡುತ್ತಿದ್ದರಂತೆ. ಇದೀಗ ಕೊರೊನಾ ಹಾವಳಿ ಮಿತಿಮೀರಿದೆ. ಜೊತೆಗೆ ಕಳೆದ ವಾರ ಈ ಗ್ರಾಮದಲ್ಲಿ ಒಂದೇ ದಿನ ಏಳು ಜನರು ಸಾವಿಗೀಡಾಗಿದ್ದಾರೆ. (ಇಬ್ಬರು ಕೊರೊನಾದಿಂದ ಮೃತಪಟ್ಟರೆ, ಇನ್ನುಳಿದ ಐವರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ) ಈ ಕಾರಣದಿಂದ ಗ್ರಾಮಸ್ಥರೆಲ್ಲರೂ ಚರ್ಚಿಸಿ, ಹಿಂದೆ ಹಿರಿಯ ಸ್ವಾಮೀಜಿಗಳು ಮಾಡಿದಂತೆ ದಿಗ್ಬಂಧನ ಪೂಜೆ ಮಾಡಲು ನಿರ್ಧರಿಸಿ, ಈಗಿನ ಸ್ವಾಮೀಜಿ ಶಿವಯೋಗಿ ಹಿರೇಮಠರವರಿಗೆ ಹೇಳಿ ಅವರಿಂದ ಪೂಜೆ ಮಾಡಿಸುತ್ತಿದ್ದಾರೆ.

FotoJet 1 51

ಒಟ್ಟಿನಲ್ಲಿ ಇಬ್ರಾಹಿಂಪುರದಲ್ಲಿ ದಿಗ್ಬಂಧನ ಪೂಜೆ ಮಾಡುತ್ತಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ. ಈ ಪೂಜೆಯಲ್ಲಿ ಗ್ರಾಮದ ಶಿವಾನಂದ ಮಠದ ಶ್ರೀ ದಯಾನಂದ ಸ್ವಾಮಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಚಿಪ್ಪಾಡಿ, ಹೇಮಣ್ಣ ಬಡಿಗೇರ ಸೇರಿದಂತೆ ಮತ್ತಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗ್ರಾಮಸ್ಥರು ಹೇಳುವುತ್ತಿರುವುದೇನು?
ಗ್ರಾಮದಲ್ಲಿ ಒಂದೇ ದಿನಕ್ಕೆ 7 ಜನ ಮೃತಪಟ್ಟಿದ್ದಾರೆ. ಇದರಿಂದ ದೊಡ್ಡ ಆಘಾತವೇ ಉಂಟಾಗಿತ್ತು. ಈ ಹಿಂದೆ ಪ್ಲೇಗ್ ಬಂದಾಗ ಮಾಡುತ್ತಿದ್ದ ದಿಗ್ಬಂಧನ ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಮಾಡಲು ನಿರ್ಧರಿಸಿ ಶ್ರೀಗಳ ಸನ್ನಿಧಾನದಲ್ಲಿ ಕೋರಿದೆವು. ಕೊರೊನಾ ಸೇರಿ ಯಾವುದೇ ರೋಗ ಗ್ರಾಮಕ್ಕೆ ಬರಬಾರದೆಂಬ ಉದ್ದೇಶದಿಂದ ನಿರ್ಣಯ ತೆಗೆದುಕೊಂಡಿದ್ದೇವೆ. ಇದರಿಂದ ಗ್ರಾಮಕ್ಕೆ ಒಳ್ಳೆಯದೇ ಆಗುತ್ತದೆ ಎಂದು ಗ್ರಾಮದ ಹಿರಿಯರು ಅಂತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *