– ಪಾಸಿಟಿವ್ ಸುದ್ದಿ ಹೇಳಿ ಸ್ವಿಚ್ ಆಫ್ ಮಾಡಿದ್ದ ಪತಿ
– ವಿಳಾಸ ಬದಲಿಸಿ ಹೊಸ ಜೀವನ ಆರಂಭ
ಮುಂಬೈ: ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸುಳ್ಳು ಹೇಳಿ ಮನೆಯಿಂದ ಹೊರ ಬಂದಿದ್ದ ಪತಿ, ಪ್ರೇಯಸಿಯೊಂದಿಗೆ ಪತ್ತೆಯಾಗಿರುವ ಘಟನೆ ನವ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ನವ ಮುಂಬೈ ಪ್ರದೇಶದ ನಿವಾಸಿಯಾಗಿದ್ದ ವ್ಯಕ್ತಿ ತನ್ನ 28 ವರ್ಷದ ಪತ್ನಿಯನ್ನು ಬಿಟ್ಟು ಪ್ರೇಯಸಿಯೊಂದಿಗೆ ಜೀವನ ನಡೆಸಲು ಕೊರೊನಾ ಸೋಂಕು ಬಳಸಿಕೊಂಡಿದ್ದಾನೆ. ಜುಲೈ 24 ರಂದು ಪತ್ನಿಗೆ ಕರೆ ಮಾಡಿದ್ದ ಮಾಡಿದ್ದ ಪತಿ, ನನಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹೆಚ್ಚು ದಿನ ಬದುಕುವುದಿಲ್ಲ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದ.
ಪತಿಯ ಮಾತಿನಿಂದ ಆತಂಕ್ಕೆ ಒಳಗಾದ ಆಕೆ ತನ್ನ ಸಹೋದರ ಹಾಗೂ ಕುಟುಂಬಸ್ಥರಿಗೆ ಮಾಹಿತಿ ನೀಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಳು. ಆದರೆ ಎಷ್ಟೇ ಪ್ರಯತ್ನಪಟ್ಟರು ಕುಟುಂಬಸ್ಥರಿಗೆ ಆತನ ಮಾಹಿತಿ ಪತ್ತೆಯಾಗಿರಲಿಲ್ಲ. ಹುಡುಕಾಟ ವೇಳೆ ಆತನ ಬೈಕ್, ಗುರುತಿನ ಚೀಟಿ, ಹೆಲ್ಮೆಟ್, ಬ್ಯಾಕ್ ಮಹಿಳೆಯ ಸಂಬಂಧಿಕರೊಬ್ಬರಿಗೆ ಮುಂಬೈನ ವಾಶಿ ಪ್ರದೇಶದಲ್ಲಿ ಕಾಣಿಸಿತ್ತು.
ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಕೈಗೆತ್ತಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಮುಂಬೈ ಆಸ್ಪತ್ರೆಗಳಲ್ಲಿ ಕೊರೊನಾದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಗಳ ಮಾಹಿತಿ ಪಡೆದು ತನಿಖೆ ನಡೆಸಿದ್ದರು. ಆದರೂ ಆತನ ಮಾಹಿತಿ ಲಭಿಸಿರಲಿಲ್ಲ. ಬಳಿಕ ಮೊಬೈಲ್ ನಂಬರ್ ಮೂಲಕ ಆತನನ್ನು ಟ್ರ್ಯಾಕ್ ಮಾಡಲು ಯತ್ನಿಸಿದ್ದ ಪೊಲೀಸರಿಗೆ ನಿರಾಸೆ ಎದುರಾಗಿತ್ತು. ಆದರೆ ಕಳೆದ ವಾರ ಆತನ ಮೊಬೈಲ್ ಇಂದೋರ್ ನಲ್ಲಿ ಆನ್ ಆಗಿತ್ತು.
ಈ ಸುಳಿವು ಇಟ್ಟುಕೊಂಡು ತನಿಖೆ ಮುಂದುವರಿಸಿದ್ದ ಪೊಲೀಸರಿಗೆ ಆತ ಇಂದೋರ್ ನಲ್ಲಿರುವ ಮಾಹಿತಿ ಲಭಿಸಿತ್ತು. ಅಲ್ಲದೇ ಆತನ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರವೂ ಬೆಳಕಿಗೆ ಬಂದಿತ್ತು. ಇಂದೋರ್‍ಗೆ ತೆರಳಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಆತ ತನ್ನ ಹೆಸರು, ವಿಳಾಸವನ್ನು ಬದಲಿಸಿಕೊಂಡು ಪ್ರೇಯಸಿಯೊಂದಿಗೆ ಹೊಸ ಜೀವನ ಆರಂಭಿಸಿದ್ದ.
ಮರಳಿ ಆತನನ್ನು ವಾಪಸ್ ಕರೆತಂದು ಕೌನ್ಸಿಲಿಂಗ್ ನೀಡಿ ಮನೆಗೆ ಕಳುಹಿಸಿದ್ದೇವೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸಂಜೀವ್ ಧುಮಾಲ್ ಮಾಹಿತಿ ನೀಡಿದ್ದಾರೆ.