ಕೊರೊನಾ ಪಾಸಿಟಿವ್ ವರದಿ ನೀಡಿದ ವಾರಿಯರ್‌ಗೆ ಸೋಂಕಿತನಿಂದ ಹಲ್ಲೆ

Public TV
2 Min Read
CORONA

– ದುಡ್ಡಿಗಾಗಿ ಪಾಸಿಟಿವ್ ವರದಿ ನೀಡ್ತೀರಿ
– ವಾರಿಯರ್ಸ್‍ಗೆ ಈಗ ಜೀವ ಭಯ

ಹಾಸನ: ಸರ್ಕಾರ ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಹಲವಾರು ಜನ ವಿರೋಧ ಪಕ್ಷದ ಶಾಸಕರು ಕೂಡ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು.

ಈ ಆರೋಪವೇ ಈಗ ಹಾಸನದಲ್ಲಿ ಮನೆಮನೆಗೆ ಹೋಗಿ ಹಗಲು ರಾತ್ರಿಯೆನ್ನದೆ ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್‍ಗಳಿಗೆ, ಆಶಾಕಾರ್ಯಕರ್ತೆಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಸರ್ಕಾರದ ವಿರುದ್ಧ ಕೇಳಿ ಬಂದ ಆರೋಪಕ್ಕೆ ಪ್ರತಿಯಾಗಿ ಮನೆ ಮನೆಗೆ ಹೋಗಿ ಕೊರೊನಾ ಪರೀಕ್ಷೆ ಮಾಡುತ್ತಾ, ಕೊರೊನಾ ಜಾಗೃತಿ ಮೂಡಿಸುತ್ತಿರುವ ವಾರಿಯರ್ಸ್ ಗೆ ಜೀವ ಭಯ ಶುರುವಾಗಿದೆ.

covid 19

ನೀವು ಹಣ ದೋಚುವ ಉದ್ದೇಶದಿಂದ ನಮಗೆ ಕೊರೊನಾ ಇಲ್ಲದಿದ್ದರೂ ಕೊರೊನಾ ಪಾಸಿಟಿವ್ ಎಂದು ವರದಿ ಕೊಡುತ್ತಿದ್ದೀರ. ನೀವು ಕೊರೊನಾ ಪಾಸಿಟಿವ್ ಎಂದು ಹೆಚ್ಚು ಹೆಚ್ಚು ವರದಿ ಕೊಟ್ಟಷ್ಟು, ನಿಮಗೆ ಹೆಚ್ಚು ಹೆಚ್ಚು ಕಮಿಷನ್ ಬರುತ್ತಿದೆ. ಹೀಗಾಗಿ ನಮಗೆ ಕೊರೊನಾನೂ ಇಲ್ಲ ಏನೂ ಇಲ್ಲ. ಇದೆಲ್ಲ ನಿಮ್ಮ ಸುಳ್ಳು ರಿಪೋರ್ಟ್ ಎಂದು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ಬಗ್ಗೆ ಕೊರೊನಾ ವಾರಿಯರ್ಸ್ ಗಳೇ ಆತಂಕ ತೋಡಿಕೊಂಡಿದ್ದು, ನಮಗೆ ಜೀವ ಭಯವಿದೆ. ದಯವಿಟ್ಟು ರಕ್ಷಣೆ ಕೊಡಿ ಅಂತಿದ್ದಾರೆ.

corona test

ಈ ಮೇಲಿನ ಹೇಳಿಕೆಗೆ ಪುಷ್ಟಿ ನೀಡುವಂತೆ ಸೆಪ್ಟೆಂಬರ್ 17ರಂದು ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ದೊಡ್ಡ ಮೇಟಿಕುರ್ಕಿ ಗ್ರಾಮದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಗ್ರಾಮದ ಮಂಜುನಾಥ್‍ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆತನ ಸ್ಲ್ಯಾಬ್ ಟೆಸ್ಟ್ ಮಾಡಿದ್ದ ಲ್ಯಾಬ್ ಟೆಕ್ನೀಷಿಯನ್ ಮೇಲೆ ಮಂಜುನಾಥ್ ಗಂಭೀರ ಹಲ್ಲೆ ಮಾಡಿದ್ದಾನೆ. ನನಗೆ ಕೊರೊನಾ ಇಲ್ಲದಿದ್ದರೂ ಹಣ ದೋಚಲು ಪಾಸಿಟಿವ್ ಅಂತಾ ವರದಿ ಬರುವ ಹಾಗೆ ಮಾಡಿದ್ದೀಯಾ ಎಂದು ಹಲ್ಲೆ ಮಾಡಿದ್ದಾನೆ. ಇದೀಗ ಕೊರೊನಾ ವಾರಿಯರ್ಸ್ ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ.

CORONA VIRUS 6

ಸದ್ಯ ಹಲ್ಲೆ ಮಾಡಿದವರ ಮೇಲೆ ಈಗಾಗಲೇ ಕೇಸ್ ದಾಖಲಾಗಿದೆ. ಒಂದು ಕಡೆ ರಾಜಕಾರಣಿಗಳು ಹಲ್ಲೆ ಮಾಡಿದವರನ್ನು ತಮ್ಮ ಪ್ರಭಾವ ಬಳಸಿ ರಕ್ಷಿಸಲು ಮುಂದಾಗುತ್ತಿರುವುದು ಕೂಡ ವಾರಿಯರ್ಸ್ ನೋವಿಗೆ ಕಾರಣವಾಗಿದೆ. ಮತ್ತೊಂದೆಡೆ ಸರ್ಕಾರದ ಮೇಲೆ ಬಂದ ಕೊರೊನಾ ಹಗರಣದ ಆರೋಪದಿಂದಾಗಿ ಫೀಲ್ಡ್ ನಲ್ಲಿ ಕೆಲಸ ಮಾಡುವ ನರ್ಸ್, ಆಶಾಕಾರ್ಯಕರ್ತೆಯಂತವರು ಜನಸೇವೆ ಮಾಡುವುದರ ಜೊತೆಗೆ ಜೀವ ಭಯದಲ್ಲೂ ಕೆಲಸ ಮಾಡುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *