ಬೆಂಗಳೂರು: ಸರ್ಕಾರ ಕೊರೊನಾ ಪರೀಕ್ಷೆಯ ದರವನ್ನು ನಿಗದಿ ಪಡಿಸಿದ್ದು, ಸರ್ಕಾರ ಸೂಚಿಸಿದ ರೋಗಿಗಳಿಗೆ 2000 ಹಾಗೂ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡರೆ 3000 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಬಳಿಕ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ದರ ಇಳಿಕೆ ಮಾಡಲಾಗಿದ್ದು, ಸರ್ಕಾರದಿಂದ ಸೂಚಿಸಿದ ರೋಗಿಗಳ ಟೆಸ್ಟ್ ಗೆ 2000 ರೂ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಟೆಸ್ಟ್ ಮಾಡಿಸಿದರೆ 3000 ರೂ. ನಿಗದಿ ಮಾಡಲಾಗಿದೆ. ಅಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ವಿಭಾಗ ಬಿಟ್ಟು ಉಳಿದ ಬೆಡ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಆದರೆ ಖಾಸಗಿಯವರಿಂದ ಶೇ.50 ಬೆಡ್ ಸರ್ಕಾರ ಪಡೆದುಕೊಳ್ಳಲಿದೆ. ಉಳಿದ ಶೇ.50ರಷ್ಟು ಬೆಡ್‍ಗಳನ್ನು ಅವರು ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದು. ಸರ್ಕಾರಕ್ಕೆ ನೀಡಿರುವ ಶೇ.50ರಷ್ಟು ಬೆಡ್ ಗಳನ್ನು ಕೋವಿಡ್ ಹೊರತುಪಡಿಸಿ ಬೇರೆ ಯಾವುದಕ್ಕೂ ಬಳಕೆ ಮಾಡಬಾರದು ಸೂಚಿಸಿದರು.
Advertisement
Advertisement
ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಎನ್‍ಡಿಆರ್ ಎಫ್, ಕೆಪಿಎಂಇ, ಎಪಿಡಮಿಕ್ ಕಾಯ್ದೆ ಇದೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಸಂಘರ್ಷದ ಹಾದಿ ಬೇಡ ಎಂದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸಿಎಂ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸುಧಾಕರ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಸಿದ್ದಾರೆ.
Advertisement
ಈಗ ಒಂದು ಲಕ್ಷ ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಇವೆ, ನಾಲ್ಕು ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ ಖರೀದಿ ಮಾಡುತ್ತೇವೆ. ಒಟ್ಟು 5 ಲಕ್ಷ ಕಿಟ್ ಬಳಸುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಂಟಿಜೆನ್ ಟೆಸ್ಟ್ ಕಿಟ್ ಬಳಸುತ್ತೇವೆ. 35 ಲಕ್ಷ ಪಿಪಿಇ ಕಿಟ್, 35 ಲಕ್ಷ ಮಾಸ್ಕ್ ಖರೀದಿಗೆ ಅನುಮೋದನೆ ನೀಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಇಂದು ಸುಮಾರು 500 ಕೋಟಿ ರೂ. ಅನುದಾನಕ್ಕೆ ಅನುಮೋದನೆ ಮಾಡಿದ್ದೇವೆ ಎಂದರು.
Advertisement
ನರ್ಸ್‍ಗಳ ವೇತನವನ್ನು 30 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 6 ತಿಂಗಳ ಕಾಲ ನರ್ಸ್‍ಗಳ ವೇತನ ಹೆಚ್ಚಳವಾಗಲಿದೆ. ಬಿಬಿಎಂಪಿ, ಆರೋಗ್ಯ, ಆಯುಷ್ ಎಲ್ಲ ನರ್ಸ್ ಗಳಿಗೂ ವೇತನ ಹೆಚ್ಚಳ ಅನ್ವಯವಾಗಲಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್ ಭಾರತ್ ಯೋಜನೆ ಅಡಿ ದರ ಪಡೆಯಬೇಕು ಎಂದು ಸೂಚಿಸಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆ ಮಾಡಲು ನಿರ್ಣಯ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳು ನಾನ್ ಕೋವಿಡ್ ಸೇವೆಗೆ ಲಭ್ಯವಿರುತ್ತವೆ. ಆಯುಷ್ ವೈದ್ಯರ ವೇತನವನ್ನು 48 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತಾತ್ಕಾಲಿಕವಾಗಿ ಕೋವಿಡ್ ಕಾರ್ಯನಿರ್ವಹಣೆಗೆ ನೇಮಕ ಮಾಡಿಕೊಳ್ಳುವ ಎಂಬಿಬಿಎಸ್ ವೈದ್ಯರಿಗೆ 80 ಸಾವಿರ ರೂ. ವೇತನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾನ್ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ತೀರ್ಮಾನ ಮಾಡಲಾಗಿದ್ದು, ಒಪಿಡಿ ದರ 10 ರೂಪಾಯಿ ಕೊಡುವಂತಿಲ್ಲ. ಅಲ್ಲದೆ ರೋಗಿಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಆಯುಷ್ ಇಲಾಖೆಯಿಂದ ಪ್ರಸ್ತಾವನೆ ಬಂದಿತ್ತು. ಆ ಪ್ರಸ್ತಾವನೆಯನ್ನು ಉನ್ನತ ಮಟ್ಟದ ಸಮಿತಿಗೆ ನೀಡಲಾಗಿದೆ. ಮುಂದಿನ ವಾರ ವರದಿ ನೀಡಲಿದೆ ಎಂದರು.