ಬೆಂಗಳೂರು: ಮುನೇಶ್ವರ ಸ್ವಾಮಿ ಟ್ರಸ್ಟ್ ವತಿಯಿಂದ ಕೊರೊನಾ ಜಾಗೃತಿಗೆ ಮುಂದಾಗಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಕೆಲಸಕ್ಕೆ ಒತ್ತು ನೀಡಿದ್ದಾರೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಲು ಮುನೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿಯಲ್ಲಿ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯವನ್ನು ನಡೆಸಲಾಯಿತು.
ಈ ಸಮಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ರಮಾಣನಂದ ಸ್ವಾಮೀಜಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.
ಕೊರೊನಾ ಸಮಯದಲ್ಲಿ ಆನ್ ಲೈನ್ ವಿದ್ಯಾಭ್ಯಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಆಡಳಿತ ಮಂಡಳಿಯಿಂದ ಈಶ್ವರ ಸ್ವರೂಪಿ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಾಲಯದ 14 ವರ್ಷದ ವಾರ್ಷಿಕೋತ್ಸವ ಜರುಗಿತು.
ಈ ವೇಳೆಯಲ್ಲಿ ಎಲ್ಲರಿಗೂ ಮಾಸ್ಕ್ ಸ್ಯಾನಿಟೈಸರ್ ನೀಡಿ ಕೊರೊನಾ ಮಹಾಮಾರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಈ ವೇಳೆ ಭವಾನಿ ಶಂಕರ್ ಮಂಜುನಾಥ್, ಸಿಎಂ ಗೌಡ, ಹನುಮಂತರಾಜು, ಪಂಚಾಯತಿ ಅಧ್ಯಕ್ಷೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.