– ಎಸ್‍ಎಂಎಸ್ ಸೂತ್ರವನ್ನು ಕಡ್ಡಾಯವಾಗಿ ಅನುಸರಿ
ಮಂಡ್ಯ: ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ ಎಂದು ಕೊರೊನಾ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಚುಂಚನಗಿರಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ.
ಜಿಲ್ಲೆಯ ನಾಗಮಂಗಲದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಫುಡ್ ಕಿಟ್ ಹಾಗೂ ಹೆಲ್ತ್ ಕಿಟ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೊರೊನಾದ ಎರಡನೇ ಅಲೆಗೆ ಎರಡು ತಲೆ ಇದೆ. ಒಂದು ಶೀಘ್ರವಾಗಿ ಹರಡುವುದು, ಎರಡನೇಯದ್ದು ವ್ಯಾಕ್ಸಿನ್‍ನನ್ನು ತಿಂದು ಅದರ ಪರಿಣಾಮವನ್ನು ಕಡಿಮೆ ಮಾಡುವ ಶಕ್ತಿಯನ್ನು ವೈರಸ್ ಬೆಳೆಸಿಕೊಂಡಿದೆ ಎಂದರು. ಇದನ್ನೂ ಓದಿ: ಕೊರೊನಾ ಡೇಂಜರ್ ನಲ್ಲಿ ಕರ್ನಾಟಕದ 25 ತಾಲೂಕುಗಳು
ಸದ್ಯ ಕೊರೊನಾ ಮಹಾ ಮಾರಿಗೆ ವ್ಯಾಕ್ಸಿನ್ ಒಂದೇ ಮಾರ್ಗವಾಗಿದೆ. ಆದರೆ ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ಬೇಜವಾಬ್ದಾರಿಯಿಂದ ಇರಬಾರದು. ಎರಡನೇ ಅಲೆಯ ಕೊರೊನಾ ವೈರಸ್ ತುಂಬಾ ಅಪಾಯಕಾರಿಯಾಗಿದೆ. ನಿರ್ಲಕ್ಷ್ಯ ಮಾಡಿದರೆ ದೊಡ್ಡ ಅಪಾಯ ತಪ್ಪಿದ್ದಲ್ಲ. ಕೊರೊನಾ ವೈರಸ್ ಆರು ತಿಂಗಳಿಗೆ ವರ್ಷಕ್ಕೆ ತನ್ನ ರೂಪವನ್ನು ಬದಲಿಸಿಕೊಂಡು ಶಕ್ತಿಯನ್ನು ಸಹ ವೃದ್ಧಿಸಿಕೊಳ್ಳುತ್ತಿದೆ. ಯಾವುದೇ ಔಷಧಿಯಿಂದ ಈ ರೋಗ ಪೂರ್ಣ ಪ್ರಮಾಣದಲ್ಲಿ ಗುಣವಾಗುವುದಿಲ್ಲ ಎಂದು ತಿಳಿಸಿದರು.
ಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಎಲ್ಲರೂ ಸಹ ಕಡ್ಡಾಯವಾಗಿ ಎಸ್‍ಎಂಎಸ್ ಸೂತ್ರವನ್ನು ಪಾಲಿಸಬೇಕಾಗಿದೆ. ಎಸ್‍ಎಂಎಸ್ ಅಂದ್ರೆ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಕೊರೊನಾ ವೈರಸ್ ಮಾತ್ರವಲ್ಲ ಎಲ್ಲ ವೈರಸ್‍ನಿಂದ ನಮ್ಮನ್ನ ನಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಜನರು ನಿರ್ಲಕ್ಷ್ಯ ವಹಿಸದೇ ಎಚ್ಚರಿಕೆಯಿಂದ ಇರಿ ಎಂದರು.