ಬೆಂಗಳೂರು: ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊರೊನಾ ನಿಯಮ ಮರೆತು ವಿದ್ಯಾರ್ಥಿಗಳ ಜೊತೆ ಶಿಕ್ಷಕರೊಬ್ಬರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.
ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಎಲ್ಲೆಡೆ ವ್ಯಾಪಕವಾಗಿ ವ್ಯಾಪಿಸುತ್ತಿದ್ದು ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಂಡಿದೆ. ಆದರೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕ ಶ್ರೀನಿವಾಸ್‍ರ ಬೀಳ್ಕೊಡುಗೆ ಸಮಾರಂಭದಲ್ಲಿ ಕೋವಿಡ್-19, ನಿಯಮವನ್ನು ಗಾಳಿಗೆ ತೂರಿ ಊರಿನಲ್ಲಿ ಬೆಳ್ಳಿ ರಥದಲ್ಲಿ ಶಿಕ್ಷಕ ದಂಪತಿಯನ್ನು ಮೆರವಣಿಗೆ ಮಾಡಿದ್ದಾರೆ.
ನಂತರ ಮಾಸ್ಕ್, ಸ್ಯಾನಿಟೈಸರ್ ಸಾಮಾಜಿಕ ಅಂತರವಿಲ್ಲದೆ ಶಾಲೆಯ ಆವರಣದಲ್ಲಿ ಮಕ್ಕಳೊಂದಿಗೆ ಮುಖ್ಯ ಶಿಕ್ಷಕ ಶ್ರೀನಿವಾಸ್ ಕುಣಿದು ಕುಪ್ಪಳಿಸಿದ್ದಾರೆ. ಸಾರ್ವಜನಿಕರು ಹಾಗೂ ಮಕ್ಕಳಲ್ಲಿ ಕೊರೊನಾ ನಿಯಮ ಹಾಗೂ ಜಾಗೃತಿ ಮೂಡಿಸಬೇಕಿದ್ದ ಶಿಕ್ಷಕರೇ ನಿಯಮ ಉಲ್ಲಂಘಿಸಿರುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕಂಡೂ ಕಾಣದಂತೆ ಮೌನವಹಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.