ಧಾರವಾಡ: ಕೊಚಿಂಗ್ ಸೆಂಟರ್, ಪಿಜಿ ಕೇಂದ್ರ, ನಿರಂತರ ಲೈಬ್ರರಿ ಮಾಲೀಕರ ಸಭೆಯಲ್ಲಿ ಕೊರೊನಾ ನಿಯಮ ಪಾಲಿಸದೇ ಇದ್ದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
ಕರ್ನಾಟಕ ಸರ್ಕಾರ ಕೋವಿಡ್ 19ರ 2ನೇ ಅಲೆ ತಡೆಯುವ ಕ್ರಮವಾಗಿ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಮತ್ತು ಸ್ಯಾನಿಟೈಸರ್ ಬಳಕೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕಿದೆ. ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳು ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳಲ್ಲಿ ಈ ನಿಯಮಗಳ ಪಾಲನೆ ಆಗುತ್ತಿಲ್ಲ.
ಪಾಲಿಕೆ ಹಾಗೂ ಪೆÇಲೀಸ್ ಇಲಾಖೆಯಿಂದ ವರದಿ ಪಡೆದು ಅಂತಹ ಕೇಂದ್ರಗಳ ಲೈಸನ್ಸ್ ರದ್ದುಪಡಿಸಿ, ಅದರ ಮಾಲೀಕರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಪಿ.ಜಿ ಕೇಂದ್ರಗಳ ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳ ಮಾಲೀಕರ ಹಾಗೂ ನಿರ್ವಾಹಕರ ಸಭೆ ಜರುಗಿಸಿ, ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಗಳ ಪಾಲನೆಗಾಗಿ ಎಲ್ಲ ವಾಣಿಜ್ಯ ಕೇಂದ್ರಗಳಿಗೆ ಹಾಗೂ ಅಂಗಡಿ ವ್ಯಾಪಾರಿಗಳಿಗೆ ತಿಳುವಳಿಕೆ ನೀಡಲಾಗಿದೆ.
ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಕೊಚಿಂಗ್ ಸೆಂಟರ್, ಪಿ.ಜಿ ಕೇಂದ್ರಗಳು ಹಾಗೂ ದಿನದ 24 ಗಂಟೆ ತೆರೆದಿರುವ ಲೈಬ್ರರಿಗಳಲ್ಲಿ ಪ್ರತಿದಿನ ಕಾರ್ಯಾಚರಣೆ ನಡೆಸಿ, ದಂಡ ವಿಧಿಸುತ್ತಿದ್ದಾರೆ ಮತ್ತು ಎಚ್ಚರಿಕೆಯ ನೋಟಿಸ್ ನೀಡುತ್ತಿದ್ದಾರೆ. ಆದರೂ ಕೆಲವು ಕೇಂದ್ರದವರು ಉದಾಸೀನತೆ ಮತ್ತು ನಿರ್ಲಕ್ಷ ವಹಿಸುತ್ತಿರುವುದು ಕಂಡು ಬರುತ್ತಿದೆ ಎಂದರು.