ಬೆಂಗಳೂರು: ಕೊರೊನಾ ನಿಯಮ ಉಲ್ಲಂಘಿಸಿ ಯಾವುದೇ ರಾಜಕೀಯ ರ‍್ಯಾಲಿ ಮಾಡಕೂಡದು ಎಂದು ಕೇಂದ್ರ ಸರ್ಕಾರ ಒತ್ತಿ ಹೇಳುತ್ತದೆ. ಆದರೆ ಅವರದ್ದೇ ಸರ್ಕಾರದ ಸಂಸದ ಇದೀಗ ಕೊರೊನಾ ನಿಯಮ ಉಲ್ಲಂಘಿಸಿ ಅದ್ಧೂರಿ ರ‍್ಯಾಲಿ ಮಾಡಿದ್ದಾರೆ. ಇದರಿಂದಾಗಿ ಸಾಮಾನ್ಯರಿಗೊಂದು, ಸಂಸದರಿಗೊಂದು ನಿಯಮವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
Advertisement
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ದೆಹಲಿಯಿಂದ ವಾಪಸ್ಸಾಗಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಅಲ್ಲದೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಅವರ ಮೆರವಣಿಗೆ ಮಾಡಿದ್ದಾರೆ. ನೂರಾರು ಜನ ಸೇರಿ ಮೆರವಣಿಗೆ ಮಾಡುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.
Advertisement
Advertisement
ಕೊರೊನಾ ಹಿನ್ನೆಲೆ ರಾಜಕೀಯ ರ‍್ಯಾಲಿಗಳನ್ನು ನಡೆಸಬಾರದು ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ. ಅಲ್ಲದೆ 100 ಕ್ಕಿಂತ ಹೆಚ್ಚು ಜನ ಗುಂಪು ಸೇರಬಾರದು ಎಂಬ ನಿಯಮ ಸಹ ಇದೆ. ಆದರೆ ಅವರದ್ದೇ ಸರ್ಕಾರದ ಸಂಸದ ರ‍್ಯಾಲಿಯಲ್ಲಿ ಭಾಗವಹಿಸುವ ಮೂಲಕ ಬೆಂಗಳೂರಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಬೆಂಗಳೂರಿಗೆ ಬಂದಿದ್ದು, ಅವರ ಸ್ವಾಗತಕ್ಕೆ ನೂರಾರು ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ಮಾಡಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ವರೆಗೆ ಬೈಕ್ ರ‍್ಯಾಲಿ ಮಾಡಲಾಗಿದೆ.
Advertisement
ಮೆರವಣಿಗೆ, ಬೈಕ್ ರ‍್ಯಾಲಿ ಮೂಲಕ ತೇಜಸ್ವಿ ಸೂರ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದು, ರ‍್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಈ ಮೂಲಕ ಕೊರೊನಾ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ವರೆಗೆ ರ‍್ಯಾಲಿ ನಡೆಸಿದ್ದು, ಸಾಮಾಜಿಕ ಅಂತರ, ಹಲವರಿಗೆ ಮಾಸ್ಕ್ ಇಲ್ಲದೆ ಬೈಕ್ ರ‍್ಯಾಲಿ ನಡೆಸಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರ‍್ಯಾಲಿ ಬಳಿಕ ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ತೇಜಸ್ವಿ ಸೂರ್ಯ ಮಾತನಾಡಿದ್ದು, ಈ ವೇಳೆ ಸಹ ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದರು. ಈ ವೇಳೆ ಸಹ ಸಾಮಾಜಿಕ ಅಂತರ ಇಲ್ಲದೆ ಕಾರ್ಯಕರ್ತರು ಒತ್ತೊತ್ತಾಗಿ ನಿಂತಿದ್ದರು. ಪೊಲೀಸರು ಸಹ ಏನೂ ಮಾತನಾಡದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಇದೇ ವೇಳೆ ಕಾರ್ಯಕರ್ತರು ತೇಜಸ್ವಿ ಸೂರ್ಯರನ್ನು ಹೆಗಲ ಮೇಲೆ ಹೊತ್ತು ಬಿಜೆಪಿ ಕಚೇರಿ ಒಳಗೆ ಕರೆತಂದರು.
ಇದರಿಂದಾಗಿ ಬಿಜೆಪಿ ಕಚೇರಿಯಲ್ಲಿ ಗದ್ದಲದ ವಾತಾವರಣ ಉಂಟಾಗಿತ್ತು. ಕಾರ್ಯಕರ್ತರ ನಡುವೆ ಜಿದ್ದಾಜಿದ್ದಿ ಉಂಟಾಗಿ ತೇಜಸ್ವಿ ಸೂರ್ಯ ಜೊತೆ ಕಚೇರಿ ಪ್ರವೇಶಿಸಲು ಪೈಪೋಟಿ ನಡೆದಿತ್ತು. ನಂತರ ತೇಜಸ್ವಿ ಸೂರ್ಯ ಬಿಜೆಪಿ ಕಚೇರಿಯೊಳಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದರು.