ನವದೆಹಲಿ : ಕೋವಿಡ್ 19 ನಿಭಾಯಿಸುವಲ್ಲಿ ಭಾರತ ವಿಫಲವಾಗಿದೆ. ಭಾರತಕ್ಕಿಂತ ಪಾಕಿಸ್ತಾನದ ಸಾಧನೆ ಉತ್ತಮವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಮೋದಿ ಸರ್ಕಾರದ ವಿರುದ್ಧ ಟೀಕೆ ವ್ಯಕ್ತ ಪಡಿಸಿದ್ದಾರೆ.
ಲಾಹೋರ್ ಸಾಹಿತ್ಯ ಸಮ್ಮೇಳನದ ವರ್ಚುಯಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ, ತಬ್ಲೀಘಿ ಜಮಾತ್ ವಿಷಯವನ್ನು ಪ್ರಸ್ತಾಪಿಸಿ ಭಾರತ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.
ಭಾರತ ಸರ್ಕಾರ ಸಾಂಕ್ರಾಮಿಕ ರೋಗವನ್ನು ತಡೆಯುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಜನರು ಅರಿತುಕೊಂಡಿದ್ದಾರೆ. ಕೋವಿಡ್ 19 ಬಗ್ಗೆ ಈಗಲೇ ಗಂಭೀರವಾಗಿ ಯೋಚಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಆರ್ಥಿಕ ಕುಸಿತದ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.
ಮುಸ್ಲಿಮರ ವಿರುದ್ಧದ ಧರ್ಮಾಂಧತೆ ಮತ್ತು ತಾರತಮ್ಯವನ್ನು ಸಮರ್ಥಿಸುವ ಸಲುವಾಗಿ ಮೋದಿ ಸರ್ಕಾರವು ತಬ್ಲೀಘಿ ಜಮಾತ್ ಅನ್ನು ದೂಷಿಸುತ್ತಿದೆ ಎಂದು ತರೂರ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಶಶಿ ತರೂರ್ ದೂಷಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ ‘ಎನ್‌ಡಿಎ’ ಎಂದರೆ ನೋ ಡೇಟಾ ಅವೈಲೇಬಲ್ ಎಂದು ವ್ಯಂಗ್ಯವಾಡಿದ್ದರು.