– ಚೆನ್ನೈ, ಜೈಪುರ, ಇಂದೋರ್ ಬಗ್ಗೆಯೂ ಮೆಚ್ಚುಗೆ
ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣದಲ್ಲಿ ಬೆಂಗಳೂರು (ಆದರ್ಶಪ್ರಾಯ) ರೋಲ್ ಮಾಡೆಲ್ ಎಂದು ಕೇಂದ್ರ ಸರ್ಕಾರವು ಹೊಗಳಿದೆ. ಜೊತೆಗೆ ಚೆನ್ನೈ, ಜೈಪುರ, ಇಂದೋರ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ.
ಆರ್ಥಿಕತೆಯನ್ನು ಪುನರಾರಂಭಿಸುವ ಹಂತದಲ್ಲಿ ಜೈಪುರ, ಇಂದೋರ್, ಚೆನ್ನೈ ಮತ್ತು ಬೆಂಗಳೂರು ನಾಲ್ಕು ನಗರಗಳು ಕೋವಿಡ್-19 ನಿಯಂತ್ರಿಸುವಲ್ಲಿ ಇತರ ನಗರಗಳಿಗೆ ಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಕಳೆದ ಕೆಲವು ದಿನಗಳಿಂದ ಸಭೆ ನಡೆಸಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ತಡೆಯುವುದು ಮತ್ತು ಮರಣ ಪ್ರಮಾಣವನ್ನು ಕಡಿಮೆಗೊಳಿಸುತ್ತಿರುವ ಪುರಸಭೆಗಳ ಮಾಹಿತಿಯನ್ನು ಕಲೆ ಹಾಕಲಾಗಿದೆ. ಈ ಎರಡು ಪ್ರಮುಖ ವಿಚಾರದಲ್ಲಿ ಶ್ರಮಿಸುತ್ತಿರುವ ಪುರಸಭೆಗಳ ಬಗ್ಗೆ ಕೇಂದ್ರವು ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರ ಭಾರತ- ಬೆಂಗಳೂರು ಈಗ ಪಿಪಿಇ ಹಬ್
Advertisement
Advertisement
ಜೈಪುರ ಮತ್ತು ಇಂದೋರ್ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಸೊಂಕಿತರ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇತ್ತ ಚೆನ್ನೈ ಮತ್ತು ಬೆಂಗಳೂರು ಮಹಾ ನಗರಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. ಆದರೆ ಭಾರತದ ಅನೇಕ ಪುರಸಭೆಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಿನ ಮರಣ ಪ್ರಮಾಣಗಳಂತಹ ಸವಾಲುಗಳನ್ನು ಎದುರಿಸುತ್ತಿವೆ. ಕೊಳಗೇರಿಗಳು, ಕಂಟೈನ್‍ಮೆಂಟ್ ಝೋನ್‍ಗಳು ಮಹಾನಗರಗಳಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಯಪಟ್ಟಿದೆ.
Advertisement
Advertisement
ಇಂದೋರ್ ಮತ್ತು ಜೈಪುರ ಎರಡೂ ಪುರಸಭೆಗಳು ಮನೆ-ಮನೆಗೆ ಸಮೀಕ್ಷೆ ಮತ್ತು ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ವೇಗವಾಗಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಇಂದೋರ್ ಪುರಸಭೆ ವಿಶೇಷ ತಂಡಗಳನ್ನು ರಚಿಸಿದರೆ, ಜೈಪುರವು ವಿವಿಧ ಪ್ರದೇಶಗಳಲ್ಲಿ ಸೀಮಿತ ದಿನಸಿ ಅಥವಾ ತರಕಾರಿ ಮಾರಾಟಗಾರಕ್ಕೆ ಅನುಮತಿ ನೀಡಿದೆ. ಈ ಮೂಲಕ ವೇಗವಾಗಿ ಕೊರೊನಾ ಹರಡದಂತೆ ತಡೆಗಟ್ಟಲಾಗಿದೆ.
ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ಮರಣ ಪ್ರಮಾಣವು ಕೇವಲ ಶೇ.1ರಷ್ಟ ಮಾತ್ರವೇ ಇದೆ. ಈ ಪ್ರಮಾಣವು ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸರಾಸರಿ ಶೇ.3ಕ್ಕಿಂತ ಕಡಿಮೆಯಾಗಿದೆ. ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ದಕ್ಷಿಣ ಭಾರತದ ಈ ಎರಡು ನಗರಗಳು ಆದರ್ಶವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಚೆನ್ನೈ ಮತ್ತು ಬೆಂಗಳೂರು ಎರಡೂ ನಗರದಲ್ಲಿ ವೆಂಟಿಲೇಟರ್ ಗಳ ಬಳಕೆಯನ್ನು ಉತ್ತಮಗೊಳಿಸಲಾಗಿದೆ. ವೆಂಟಿಲೇಟರ್ ಗಳನ್ನು ಹೆಚ್ಚಾಗಿ ಬಳಸಿದ ಕೆಲವು ನಗರಗಳನ್ನು ನಾವು ನೋಡಿದ್ದೇವೆ. ಆದರೆ ದಕ್ಷಿಣ ರಾಜ್ಯಗಳಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ರೋಗಿಗಳ ನಿರ್ವಹಣೆ ಹೆಚ್ಚು ಉತ್ತಮವಾಗಿದೆ” ಎಂದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಳವಡಿಸಿಕೊಂಡ ಕಾರ್ಯತಂತ್ರವನ್ನು ಇತ್ತೀಚಿನ ಸಭೆಗಳಲ್ಲಿ ಶ್ಲಾಘಿಸಲಾಯಿತು. ಆರೋಗ್ಯ ಮೂಲಸೌಕರ್ಯಗಳನ್ನು ಸಂಗ್ರಹಿಸಲು ನಗರವು ಖಾಸಗಿ ಆಸ್ಪತ್ರೆಗಳು ಮತ್ತು ಪುರಸಭೆ ಅಧಿಕಾರಿಗಳ ಜಾಲವನ್ನು ಸ್ಥಾಪಿಸಿದೆ.