ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಕರ್ನಾಟಕವನ್ನು ಒಂದು ತಿಂಗಳು ಲಾಕ್‍ಡೌನ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಲಾಕ್‍ಡೌನ್‍ನಿಂದ ಕೊರೊನಾ ನಿಯಂತ್ರಣ ಆಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಾನು ನಮ್ಮ ಶಾಸಕರಿಂದ ಮಾಹಿತಿ ಪಡೆದಿದ್ದು ಇದು ಸುಳ್ಳು. ಸರ್ಕಾರ ಕೊರೊನಾ ಪರೀಕ್ಷೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಕೊರೊನಾ ಕೇಸ್‍ಗಳು ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ತಜ್ಞರ ಸಮಿತಿ ಸಹ ಟೆಸ್ಟಿಂಗ್ ಕಡಿಮೆ ಮಾಡಬಾರದು ಎಂದು ತಿಳಿಸಿದೆ. ಸರ್ಕಾರ ಸತ್ಯ ಮುಚ್ಚಿಡಬಾರದು. ದೊಡ್ಡ ಅನಾಹುತ ಆಗದಂತೆ ನೋಡಿಕೊಳ್ಳಬೇಕು. ಲಾಕ್ ಡೌನ್ ಅವಶ್ಯಕತೆ ಇದ್ದು, ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಸಮಸ್ಯೆಗೆ ಸಂಸದರು ಕೆಲಸ ಮಾಡಬೇಕು. ಕೇಂದ್ರ ನಮ್ಮನ್ನ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ನಮ್ಮ ಸಂಸದರಿಗೆ ಪ್ರತಿಭಟನೆ ಮಾಡುವ ಧೈರ್ಯವಿಲ್ಲ. ರಾಜ್ಯದ ಪರ ಸಂಸದರು ಧ್ವನಿ ಎತ್ತಬೇಕು. ಮೋದಿ ಅವರಿಗೆ ಎಷ್ಟು ಜನ ಮಂತ್ರಿ ಇದ್ದಾರೆ ಅಂತ ಗೊತ್ತಿಲ್ಲ. ಅನೇಕ ಕೇಂದ್ರ ಸಚಿವರೇ ಕಾಣೆಯಾಗಿದ್ದಾರೆ. ರಾಜ್ಯಕ್ಕಾಗಿ ನಮ್ಮ ಸಂಸದರು ಪ್ರತಿಭಟನೆ ಮಾಡಿ ನಮ್ಮ ರಾಜ್ಯದ ಪರ ಕೆಲಸ ಮಾಡಬೇಕು ಎಂದು ಹೇಳಿ ಸಂಸದರ ನಡೆಯನ್ನು ಟೀಕಿಸಿದರು.
ಸರ್ಕಾರ ಸರಿಯಾಗಿ ಕೆಲಸ ಮಾಡದ್ದಕ್ಕೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿದೆ. ನಿಮ್ಮ ನಡವಳಿಕೆ ಸರಿ ಇದ್ದಿದ್ದರೆ ನ್ಯಾಯಾಂಗ ಯಾಕೆ ಹಸ್ತಕ್ಷೇಪ ಮಾಡುತ್ತಿತ್ತು? ನಿಮ್ಮ ನಡವಳಿಕೆ ಸರಿ ಮಾಡಿಕೊಂಡು ಕೆಲಸ ಮಾಡಿ. ಅದನ್ನು ಬಿಟ್ಟು ಕೋರ್ಟ್ ಮಧ್ಯ ಪ್ರವೇಶದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.