– ಡಿಕೆಶಿ ವಿರುದ್ಧ ವಾಗ್ದಾಳಿ
ಹುಬ್ಬಳ್ಳಿ: ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ನಾವು ಸಕಲ ಸಿದ್ಧತೆಯಲ್ಲಿದ್ದೇವೆ. ಹೀಗಾಗಿ ನಮ್ಮ ದೇಶದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯೂರೋಪ್ ರಾಷ್ಟದಲ್ಲಿ ಮತ್ತೆ ಲಾಕ್‍ಡೌನ್ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಭಾರತ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ನಾವು ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಸಕಲ ಸಿದ್ಧತೆಯಲ್ಲಿದ್ದೇವೆ. ಹೀಗಾಗಿ ನಮ್ಮ ದೇಶದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಶಿರಾ ಮತ್ತು ಆರ್.ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಅವರು ಮಾತನಾಡುವುದು ಹಾಸ್ಯಾಸ್ಪದ. ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅವರು ಬೇಲ್ ಮೇಲೆ ಹೊರಗಡೆ ಇದ್ದಾರೆ. ಮೊದಲು ಅದನ್ನ ಡಿಕೆಶಿ ಅರಿತುಕೊಳ್ಳಲಿ. ಇದು ಕಾಂಗ್ರೆಸ್ಸಿಗರ ದೊಡ್ಡ ಸಮಸ್ಯೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಭಿನಂದನ್‍ರನ್ನು ಬಿಡುಗಡೆ ಮಾಡದಿದ್ರೆ ಪಾಕ್ ಬ್ರಿಗೇಡ್‍ಗಳು ಧ್ವಂಸ ಆಗ್ತಿತ್ತು – ಧನೋವಾ
ಪುಲ್ವಾಮಾ ದಾಳಿ ಕುರಿತು ಪಾಕಿಸ್ತಾನ ಪಾರ್ಲಿಮೆಂಟ್ ನಲ್ಲಿ ಸಚಿವರೊಬ್ಬರ ಹೇಳಿಕೆ ವಿಚಾರ ಸಂಬಂಧ ಮಾತನಾಡಿ, ಈ ಕುರಿತು ಅಲ್ಲಿನ ಮಂತ್ರಿಗಳೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪುಲ್ವಾಮಾ ದಾಳಿ ಕುರಿತು ಇಲ್ಲಿನ ಕಾಂಗ್ರೆಸ್ ಪಕ್ಷದವರು ಸಾಕ್ಷಿ ಕೇಳಿದ್ದರು. ಈ ಬಗ್ಗೆ ಪಾಕಿಸ್ತಾನದವರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆ ಮಾಡುತ್ತಿದೆ ಅಂತ ಜಾಗತಿಕ ವೇದಿಕೆಯಲ್ಲಿ ನಾವು ಹೇಳುತ್ತಿದ್ದೆವು. ಈಗ ಅವರೇ ಬಹಿರಂಗವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡೋದಾಗಿ ಒಪ್ಪಿಕೊಂಡಿದ್ದಾರೆ. ಭಾರತ ದೇಶ ಸಾಕಷ್ಟು ಸದೃಢ ಎಂಬುದು ಪಾಕಿಸ್ತಾನಕ್ಕೆ ತಿಳಿದಿದೆ ಎಂದರು. ಇದನ್ನೂ ಓದಿ: ಸೇನಾ ಮುಖ್ಯಸ್ಥರ ಕಾಲು ನಡುಗುತ್ತಿತ್ತು- ಅಭಿನಂದನ್ ಬಿಡುಗಡೆಯ ಕಾರಣ ಬಿಚ್ಚಿಟ್ಟ ಪಾಕ್ ಸಂಸದ