– ಪ್ರಧಾನಿ ಮೋದಿ ಹೆಸರಲ್ಲಿ ಗೋ ದತ್ತು ಸ್ವೀಕಾರ
ಉಡುಪಿ: ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೊನಾ ಮುಕ್ತ ಭಾರತಕ್ಕಾಗಿ 1008 ಎಳನೀರ ಅಭಿಷೇಕ ನಡೆದಿದೆ. ಸಾಂಕ್ರಾಮಿಕ ದೂರವಾಗಲಿ ಜನ ನೆಮ್ಮದಿಯ ಜೀವನ ಸಾಗಿಸುವಂತಾಗಲಿ ಅಂತ ದೇವರಲ್ಲಿ ಪೂಜೆ ಸಲ್ಲಿಸಲಾಯಯ್ತು.
ಕೊರೊನಾ ವಿರುದ್ಧ ಹೋರಾಟದಲ್ಲಿ ಯಶಸ್ಸಿಗಾಗಿ ಪ್ರಾರ್ಥಿಸಿ 1008 ಎಳನೀರು ಅಭಿಷೇಕ ಸೇವೆಯು ಪೂಜ್ಯ ಪಲಿಮಾರು, ಪುತ್ತಿಗೆ ಸ್ವಾಮೀಜಿ ಮತ್ತು ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ವೇದಮೂರ್ತಿ ರಾಮಕೃಷ್ಣ ತಂತ್ರಿ ಕುಕ್ಕಿಕಟ್ಟೆ ಇವರು ಅಭಿಷೇಕ ನೆರವೇರಿಸಿದರು. ದೇವಳದ ಅರ್ಚಕರು, ಸಿಬಂದಿ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಧಾರ್ಮಿಕ ವಿಧಿ ವಿಧಾನಕ್ಕೆ ಸಲಹೆ ನೀಡಿದರು.
ಶಾಸಕ ರಘುಪತಿ ಭಟ್, ಉದ್ಯಮಿ ಮಹೇಶ್ ಠಾಕೂರ್ ಈ ಸೇವೆಯ ನೇತೃತ್ವ ವಹಿಸಿದ್ದರು. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. ಕೊರೊನಾ ನಿರ್ಬಂಧದ ಹಿನ್ನೆಲೆಯಲ್ಲಿ ಭಕ್ತರಿಗೆ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಇರಲಿಲ್ಲ.
ಎಳನೀರು ಅಭಿಷೇಕಕ್ಕೆ ಸಹಕಾರ ನೀಡಬಹುದೆಂದು ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ನಿವೇದಿಸಲಾಗಿತ್ತು. ಆ ಮನವಿಗೆ ಒಳ್ಳೆಯ ಸ್ಪಂದನೆ ದೊರಕಿದ್ದು ಉಡುಪಿ ಮಂಗಳೂರು ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು ಮೈಸೂರು, ಹುಬ್ಬಳ್ಳಿ ಮಂಡ್ಯ ಧಾರವಾಡ, ದೆಹಲಿ, ಮುಂಬಯಿ, ಬೆಳಗಾವಿ, ಹೈದರಾಬಾದ್, ಚೆನ್ನೈ ಮಾತ್ರವಲ್ಲದೇ ಅಮೆರಿಕಾ ದುಬೈ ಆಸ್ಟ್ರೇಲಿಯಾ ಗಳಿಂದಲೂ ಅನೇಕ ಭಕ್ತರು ಆರ್ಥಿಕ ಸಹಕಾರ ನೀಡಿದ್ದಾರೆ.
ಮೋದಿ ಹೆಸರಲ್ಲಿ ಗೋ ದತ್ತು ಸ್ವೀಕಾರ:
ಗೂಗಲ್ ಪೇ ಮೂಲಕ ಬಂದ ಹಣದಲ್ಲಿ ಅಭಿಷೇಕದ ಖರ್ಚನ್ನು ತೆಗೆದು ಉಳಿಕೆ ಹಣದಲ್ಲಿ ನೀಲಾವರ ಗೋಶಾಲೆಯಲ್ಲಿ ಒಂದು ಹಸುವನ್ನು ನರೇಂದ್ರ ಮೋದಿಯವರ ಹೆಸರಲ್ಲಿ ಒಂದು ವರ್ಷಕ್ಕೆ ದತ್ತು ಸ್ವೀಕಾರ ಮಾಡಲಾಯ್ತು. ಇದಕ್ಕೆ 12,000 ರೂಪಾಯಿ ವೆಚ್ಚವಾಗುತ್ತಿದೆ. ವಿದ್ಯಾಪೋಷಕ್ ನ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಹತ್ತು ಸಾವಿರ ರೂಪಾಯಿ, ಉಡುಪಿಯಲ್ಲಿ ನಾಗರಿಕರಿಗೆ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಇಬ್ಬರಿಗೆ ತಲಾ 5000 ರೂ. ನಂತೆ ಇಂಧನ ಖರೀದಿಗೆ ನೆರವು ನೀಡಲಾಯ್ತು. ಮುಖ್ಯಮಂತ್ರಿಗಳ ಕೊರೊನಾ ಪರಿಹಾರ ನಿಧಿಗೂ ಹಸ್ತಾಂತರಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.